ನವದೆಹಲಿ: ಕೇಂದ್ರ ಸರ್ಕಾರದ ಉದ್ದೇಶಿತ ಭಾರತೀಯ ಟೆಲಿಗ್ರಾಫ್ ಕಾಯಿದೆ ಪುನರರಚನೆಯ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ.
ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ಲೋಕಸಭೆಯಲ್ಲಿ ಟೆಲಿಕಾಂ ಮಸೂದೆಯನ್ನು ಮಂಡಿಸಿದರು. ದೂರಸಂಪರ್ಕ ವಲಯವನ್ನು ನಿಯಂತ್ರಿಸುವ 138 ವರ್ಷಗಳಷ್ಟು ಹಳೆಯದಾದ ಭಾರತೀಯ ಟೆಲಿಗ್ರಾಫ್ ಕಾಯಿದೆಯನ್ನು ಬದಲಾಯಿಸಲು ಅನುವಾಗುವಂತೆ ಕೇಂದ್ರ ಸರ್ಕಾರವು ಸೋಮವಾರ ಈ ದೂರಸಂಪರ್ಕ ಮಸೂದೆ 2023ನ್ನು ಮಂಡಿಸಿದೆ.
ಈ ಮಸೂದೆಯು ರಾಷ್ಟ್ರೀಯ ಭದ್ರತೆ ಸಂಬಂಧ, ಯಾವುದೇ ದೂರಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಬಹುದಾಗಿದೆ. ನೆಟ್‌ವರ್ಕ್‌ಗಳು ಅಥವಾ ಅವುಗಳ ಘಟಕಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಈ ಕಾನೂನು ಸರ್ಕಾರಕ್ಕೆ ಅವಕಾಶ ನೀಡುತ್ತದೆ. ಅಷ್ಟೇ ಅಲ್ಲ, ಇದು ಕಾನೂನು ರೂಪದಲ್ಲಿ ಜಾರಿಗೆ ಬಂದರೆ “ದೇಶದ ಭದ್ರತೆ, ಸಾರ್ವಭೌಮತೆ, ಸಮಗ್ರತೆಗೆ ಧಕ್ಕೆ ತರುವಂತೆ ರವಾನೆಯಾಗುವ ಮೊಬೈಲ್ ಮತ್ತಿತರ ಸಂದೇಶಗಳಿಗೂ ಕಡಿವಾಣ ಬೀಳಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.




























































