ಬೆಂಗಳೂರು: ಸಾರಿಗೆ ಕ್ಷೇತ್ರದಲ್ಲಿ ಹೊಸತನದ ಪರಿಚಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ ಮತ್ತೊಂದು ಹೆಜ್ಜೆ ಇಟ್ಟಿದೆ. ಬಸ್ ಸೇವೆಯ ಜೊತೆಯಲ್ಲೇ ಪಾರ್ಸೆಲ್-ಕೊರಿಯರ್ ಸೇವೆಗಳೂ KSRTC ನಿಗಮದಿಂದ ಸಿಗಲಿದೆ.
KSRTC ವ್ಯಾಪ್ತಿಗೆ ಸೇರ್ಪಡೆಗೊಳಿಸುತ್ತಿರುವ ನಮ್ಮ ಕಾರ್ಗೋ ಪಾರ್ಸೆಲ್ ಮತ್ತು ಕೊರಿಯರ್ ಸೇವೆಗೆ ಅಗತ್ಯ ಭೂಮಿಕೆ ಸಿದ್ದವಾಗಿದ್ದು ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ಸಿದ್ದತೆಗಳಿಗೆ ಅಂತಿಮ ಸ್ಪರ್ಷ ಸಿಕ್ಕಿದೆ.
KSRTCಯ ‘ನಮ್ಮ ಕಾರ್ಗೋ ಪಾರ್ಸೆಲ್ ಮತ್ತು ಕೊರಿಯರ್’ ಸೇವೆ ಪರಿಪೂರ್ಣ ಜಾರಿ ಸಂಬಂಧ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ಉಸ್ತುವಾರಿಯಲ್ಲಿ ಪರಿಪೂರ್ಣ ತಯಾರಿ ನಡೆದಿದೆ. ಸಾರಿಗೆ ಸಚಿವರೇ 23.12.2023 ರಂದು ಸುಮಾರು 20 ಟ್ರಕ್ ಗಳಿಗೆ ಚಾಲನೆ ನೀಡಲಿದ್ದಾರೆ.
ಈ ನಡುವೆ, KSRTCಗೆ ಸೇರ್ಪಡೆಗೊಳಿಸುತ್ತಿರುವ ‘ನಮ್ಮ ಕಾರ್ಗೋ ಪಾರ್ಸೆಲ್ ಮತ್ತು ಕೊರಿಯರ್’ ಟ್ರಕ್’ಗಳನ್ನು ಸಚಿವ ರಾಮಲಿಂಗಾರೆಡ್ಡಿ, ಅವರು ಪರಿಶೀಲಿಸಿದರು. ಕೆ.ಎಸ್.ಆರ್.ಟಿ.ಸಿ. ಕೇಂದ್ರ ಕಛೇರಿಯಲ್ಲಿ ಪರಿಶೀಲನೆ ನಡೆಸಿದ ಸಚಿವರು ಈ ಯೋಜನೆಯು ಜನರಿಗೆ ನಿರೀಕ್ಷಿತ ಸೇವೆ ನೀಡಲಿದೆ ಎಂದು ಆಶಾವಾದ ವ್ಯಕ್ತಪಡಿಸಿದರು. ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಸಹಿತ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಸಚಿವರಿಗೆ ಮಾಹಿತಿ ನೀಡಿದರು.