ಮಂಗಳೂರು: ಗೂಗಲ್ ಮ್ಯಾಪ್’ನಲ್ಲಿ ಸ್ಥಳವನ್ನು ತಿರುಚಲು ಸಾಧ್ಯವೇ? ಮಂಗಳೂರಿನ ಪುರಾಣ ಪ್ರಸಿದ್ಧ ಮಂಗಳಾದೇವಿ ದೇವಸ್ಥಾನದ ಸ್ಥಳವನ್ನೇ ಗೂಗಲ್ ಮ್ಯಾಪ್ ಲೊಕೇಷನ್ ನಲ್ಲಿ ತಿರುಚಲಾಗಿದೆ. ಸೈಬರ್ ಖದೀಮರು ಈ ರೀತಿ ಲೊಕೇಶನ್ ತಿರುಚಿರುವುದು ಕಂಡುಬಂದಿದೆ.
ಮಂಗಳಾದೇವಿ ದೇವಸ್ಥಾನದ ಸ್ಥಳವನ್ನು ಗೂಗಲ್ ಮ್ಯಾಪ್ ಮೂಲಕ ಪರಿಶೀಲಿಸಿದರೆ ದೇಗುಲ ಇರುವ ಜಾಗ ಬೋಳಾರ ಶೇಖ್ ಉಮ್ಮರ್ ಸಾಹೇಬ್ ಕಾಂಪೌಂಡ್ ಅಂತ ಸಿಗುತ್ತದೆ. ಸೈಬರ್ ಕಳ್ಳರು ಈ ರೀತಿ ಮರುನಾಮಕರಣ ಮಾಡಿರಬಹುದೆಂದು ಶಂಕಿಸಲಾಗಿದೆ.
ಮಂಗಳಾದೇವಿ ದೇವಸ್ಥಾನದಿಂದ ಅನತಿ ದೂರದಲ್ಲಿ ಬೋಳಾರ ಶೇಖ್ ಉಮ್ಮರ್ ಸಾಹೇಬ್ ಕಾಂಪೌಂಡ್ ಇದೆ. ಅದನ್ನೇ ದೇಗುಲದ ಹೆಸರಿರುವ ಜಾಗಕ್ಕೆ ಮರುನಾಮಕರಣ ಮಾಡಿ ತಿರುಚಲಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ದೇಗುಲದ ಆಡಳಿತ ಮಂಡಳಿಯು ದಕ್ಷಿಣಕನ್ನಡ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಗೂಗಲ್ ಮ್ಯಾಪ್ ಲೊಕೇಷನ್ ಮತ್ತೆ ಸರಿಯಾಗಿದೆ ಎನ್ನಲಾಗಿದೆ.


















































