ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಶಾಲೆಗಳಲ್ಲಿ ಬಾಂಬ್ ಇಟ್ಟಿರುವ ಈಮೇಲ್ ಸಂದೇಶದಿಂದ ಬೆಚ್ಚಿಬಿದ್ದಿದ್ದ ಬೆಂಗಳೂರಿನಲ್ಲಿ ಇಂದು ಮತ್ತೆ ಕಿಡಿಗೇಡಿಗಳ ಕಿತಾಪತಿ ನಡೆದಿದೆ. ಬೆಂಗಳೂರಿನ ರಾಜ ಭವನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು ಪೊಲೀಸರು ಕಾರ್ಯಾಚರಣೆಯ ಅಖಾಡಕ್ಕೆ ಧುಮುಕಿದ್ದಾರೆ.
ರಾಜಭವನದಲ್ಲಿ ಬಾಂಬ್ ಇಡಲಾಗಿದೆ ಎಂದು ಸೋಮವಾರ ರಾತ್ರಿ 11.30ರ ಸುಮಾರಿಗೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ಅನಾಮದೇಯ ಕರೆ ಬಂದಿತ್ತು. ಕೂಡಲೇ ಪೊಲೀಸರು ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್‌ನೊಂದಿಗೆ ರಾಜಭವನಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಕ್ಕಿಲ್ಲ.
ಬೆದರಿಕೆ ಕರೆ ಬೆನ್ನಲ್ಲೇ ರಾಜಭವನದ ಬಳಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.


















































