ಬೆಂಗಳೂರು: ಹಿಂದೂ- ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಹೇಳಿಕೆಯನ್ನು ಜಮೀರ್ ಅಹ್ಮದ್ ಅವರು ನೀಡಿದ್ದಾರೆ ಎಂದು ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಅವರು ಆಕ್ಷೇಪಿಸಿದ್ದಾರೆ.
ಬೆಳವಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಸ್ಪೀಕರ್ ಸ್ಥಾನದ ಕುರಿತು ಅಗೌರವದ ಮಾತುಗಳನ್ನು ಕಾಂಗ್ರೆಸ್ ಸರಕಾರ ಮಾಡಿದೆ. ಸ್ಪೀಕರ್ ಅವರು ಸಂವಿಧಾನದ ಕುರಿತು ಮಾತನಾಡಿ ಸಂವಿಧಾನ ಎಂದರೇನು? ಯಾಕೆ ಅದನ್ನು ಗೌರವಿಸಬೇಕು? ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್- ಹೀಗೆ ಯಾವುದೇ ಧರ್ಮ, ಜಾತಿ ಮೀರಿ ಎಲ್ಲ ಸದಸ್ಯರು ತಮ್ಮ ನಡವಳಿಕೆ ಮಾಡಬೇಕೆಂದು ತಿಳಿಸಿದ್ದರು. ಸ್ಪೀಕರ್ ಸ್ಥಾನ ಎಂದರೆ ನ್ಯಾಯಾಧೀಶರ ಸ್ಥಾನ. ಎಲ್ಲ ಸದಸ್ಯರಿಗಿಂತ ಮೇಲ್ಮಟ್ಟದ ಸ್ಥಾನ ಎಂದು ವಿಶ್ಲೇಷಿಸಿದರು.
ಡಾ.ಅಂಬೇಡ್ಕರರ ಸಂವಿಧಾನದಡಿ ಆ ಸ್ಥಾನಕ್ಕೆ ವಿಶೇóಷ ಗೌರವ ಇದೆ. ಪೂಜ್ಯನೀಯ ಸ್ಥಾನ ಆ ಸ್ಥಾನದ್ದು. ಇಂಥ ಸಂದರ್ಭದಲ್ಲಿ ಈ ಮಂತ್ರಿಮಂಡಲದ ಸದಸ್ಯರಾದ ಜಮೀರ್ ಅಹ್ಮದ್ ಖಾನ್ ಅವರು ಮುಸ್ಲಿಮರ ಸಭೆಯಲ್ಲಿ, ‘ಕರ್ನಾಟಕದಲ್ಲಿ ಯಾರೂ ಕೂಡ ಇದುವರೆಗೆ ಮುಸ್ಲಿಮರನ್ನು ಸ್ಪೀಕರ್ ಮಾಡಿಯೇ ಇಲ್ಲ. ಪ್ರಥಮ ಬಾರಿಗೆ ನಾವು ಮಾಡಿದ್ದೇವೆ. ಆ ಸ್ಥಾನದಲ್ಲಿ ಕುಳಿತ ಸ್ಪೀಕರ್ ಅವರಿಗೆ ಎಲ್ಲ ಬಿಜೆಪಿ ನಾಯಕರು ಅಂದರೆ ಹಿಂದೂಗಳು ನಮಸ್ಕಾರ ಹಾಕಬೇಕಿದೆ. ಅಂಥ ಸ್ಥಾನ ಕೊಟ್ಟಿದ್ದೇವೆ’ ಎಂದಿದ್ದಾರೆ. ಮುಸ್ಲಿಮರು ಎಲ್ಲ ಧರ್ಮಕ್ಕಿಂತ ದೊಡ್ಡವರು, ಅವರ ಅಡಿಯಾಳಾಗಿ ಸಲಾಂ ಎಂದು ಕುಳಿತುಕೊಳ್ಳಬೇಕು ಎಂಬ ಭಾವನೆ ಅವರದು ಎಂದು ಟೀಕಿಸಿದರು.
ಹಿಂದೂ- ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಹೇಳಿಕೆಯನ್ನು ಜಮೀರ್ ಅಹ್ಮದ್ ಅವರು ನೀಡಿದ್ದಾರೆ. ನಾವು ಸದನದಲ್ಲಿ ಪ್ರತಿಭಟನೆ ಮಾಡಿದ್ದೇವೆ. ಸಂವಿಧಾನದ ಪಾಠ ಮಾಡುವ ಸ್ಪೀಕರ್ ಅವರ ಬಾಯಿಯಲ್ಲಿ ಜಮೀರ್ ಅಹ್ಮದ್ ಅವರು ಮಾಡಿದ್ದು ತಪ್ಪು ಎಂದು ಬಂದಿಲ್ಲ. ಇದು ದುರದೃಷ್ಟಕರ ಎಂದು ನುಡಿದರು. ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡುವುದಾಗಿ ಸಿದ್ದರಾಮಯ್ಯರ ಸರಕಾರ ಹೇಳಿದೆ. ಇವತ್ತು ಮಸೂದೆಗಳನ್ನೂ ಮಂಜೂರು ಮಾಡಿದ್ದಾರೆ. ಸ್ಟ್ಯಾಂಪ್ ಡ್ಯೂಟಿ, ಚಾರಿಟಿ ಸಂಬಂಧ ಕಾರ್ಯಕ್ಕೂ ಹೆಚ್ಚು ಸುಂಕ ವಿಧಿಸಿದ್ದಾರೆ. ಮೌಲ್ವಿಗಳಿಗೆ 10 ಸಾವಿರ ಕೋಟಿ ನೀಡಲು ಹಣ ಸಂಗ್ರಹಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಸರಕಾರವು ಮತಕ್ಕಾಗಿ ಮುಸ್ಲಿಮರನ್ನು ಓಲೈಸುತ್ತಿದೆ. ಜಮೀರ್ ಅಹ್ಮದ್ ಅವರದು ಹುಚ್ಚು ಮತ್ತು ವಿಕೃತ ಹೇಳಿಕೆ; ಸಂವಿಧಾನಕ್ಕೆ ಇದು ಕಪ್ಪು ಚುಕ್ಕಿ. ಸರಕಾರ ಅವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕಿತ್ತು. ಸ್ಪೀಕರ್ ಅವರೂ ಆ ಸ್ಥಾನದ ಗೌರವ ಎತ್ತಿ ಹಿಡಿದಿಲ್ಲ ಎಂದು ಆಕ್ಷೇಪಿಸಿದರು.
ಕೃಷ್ಣೆಯ ಕಣ್ಣೀರು, ತುಪ್ಪ ತಿನ್ನುವ ಕಾಂಗ್ರೆಸ್ಸಿಗರು..
ಪ್ರಜಾಪ್ರಭುತ್ವ ದಮನ ಮಾಡುವ, ಮುಸ್ಲಿಮರನ್ನು ಓಲೈಸುವ ಸರಕಾರ ಇದು. ಇದರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಆರ್.ಅಶೋಕ್ ತಿಳಿಸಿದರು.
ಶಾಸಕರಾದ ಬಸವನಗೌಡ ಯತ್ನಾಳ್, ಅರಗ ಜ್ಞಾನೇಂದ್ರ, ಅರವಿಂದ್ ಬೆಲ್ಲದ, ಡಾ ಸಿ.ಎನ್.ಅಶ್ವಥ್ ನಾರಾಯಣ್, ಸುರೇಶ್ ಕುಮಾರ್ ಹಾಗೂ ಶಾಸಕರು ಇದ್ದರು.





















































