ಬೆಳಗಾವಿ: ಮೀಸಲಾತಿ ವಿಚಾರದಲ್ಲಿ ತಮ್ಮ ಸಮುದಾಯ ಯಾವುದೇ ಕಾರಣಕ್ಕೂ ರಾಜಿಯಾಗಲ್ಲ ಎಂಬ ಸಂದೇಶ ರವಾನಿಸಿರುವ ಪಂಚಮಸಾಲಿ ಲಿಂಗಾಯತ ಸಮುದಾಯದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು ಸರ್ಕಾರಗಳ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ತಮ್ಮ ಸಮುದಾಯಕ್ಕೆ 2A ಮೀಸಲಾತಿ ಅನುಷ್ಠಾನಗೊಳಿಸಲು ಒತ್ತಾಯಿಸಿ ಡಿಸೆಂಬರ್ 13 ರಂದು ಶಕ್ತಿ ಪ್ರದರ್ಶನ ಆಯೋಜೊಜಿಸಿದ್ದು, ಸಮುದಾಯದ ಮಂದಿ ಈ ಹೋರಾಟದಲ್ಲಿ ಭಾಗಿಯಾಗಬೇಕೆಂದು ಶ್ರೀಗಳು ಕರೆ ನೀಡಿದ್ದಾರೆ.
ಪಂಚಮಸಾಲಿ – ಗೌಡ – ಮಲೆಗೌಡ – ದೀಕ್ಷಾ ಲಿಂಗಾಯತರಿಗೆ 2A ಮೀಸಲಾತಿ ಅನುಷ್ಠಾನ ಹಾಗೂ ಲಿಂಗಾಯತ ಉಪ ಸಮಾಜಗಳಿಗೆ OBC ಮೀಸಲಾತಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿ ಹಾಗೂ ಈ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಡಿಸೆಂಬರ್ 13 ರಂದು ಹೋರಾಟ ನಡೆಸಲಾಗುವುದೆಂದು ಶ್ರೀಗಳು ತಿಳಿಸಿದ್ದಾರೆ. ಸುವರ್ಣ ವಿಧಾನಸೌಧದ ಅಧಿವೇಶನ ಸಂಧರ್ಭದಲ್ಲಿ ಡಿಸೆಂಬರ್ 13 ರ ಬುಧವಾರ ಬೆಳಿಗ್ಗೆ 10 ಕ್ಕೆ ಗಾಂಧಿಭವನದಿಂದ ಮೆರವಣಿಗೆ ಮೂಲಕ ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ನ ಐತಿಹಾಸಿಕ ವೃತ್ತದಲ್ಲಿ ಬೃಹತ್ ಧರಣಿ ನಡೆಸಲಾಗುತ್ತದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಹೋರಾಟದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡು ಮೀಸಲಾತಿ ಪಡೆಯೋಣ , ಪಂಚಋನ ತೀರಿಸೋಣ ಎಂದಿರುವ ಶ್ರೀಗಳು, ರಾಜ್ಯಾದ್ಯಂತ ಸಮಾಜ ಭಾಂಧವರು ಜಿಲ್ಲಾ, ತಾಲೂಕು , ನಗರ ಮಟ್ಟದಲ್ಲಿ ಪೂರ್ವಭಾವಿ ಸಭೆ , ಪತ್ರಿಕಾಗೋಷ್ಠಿ ಮಾಡಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರನ್ನು ಕರೆದುಕೊಂಡು ಬನ್ನಿ ಎಂದು ಸಮುದಾಯದ ಮುಖ್ಜಂದರಿಗೆ ಕರೆ ನೀಡಿದ್ದಾರೆ.
ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್, ಶಾಸಕರಾದ ವಿಜಯಾನಂದ ಕಾಶಪ್ಪನವರ್, ಬಸನಗೌಡ ಪಾಟೀಲ ಯತ್ನಾಳ್, ಅರವಿಂದ್ ಬೆಲ್ಲದ, ವಿನಯ್ ಕುಲಕರ್ಣಿ, ಪ್ರಕಾಶ ಹುಕ್ಕೇರಿ, ಸಂಸದರಾದ ಈರಣ್ಣ ಕಡಾಡಿ, ಕರಡಿ ಸಂಗಣ್ಣ, ಮಾಜಿ ಶಾಸಕರಾದ ಎಚ್.ಎಸ್.ಶಿವಶಂಕರ, ವಿಶ್ವನಾಥ ಪಾಟೀಲ, ಎ.ಬಿ.ಪಾಟೀಲ್, ಸಿದ್ದು ಸವದಿ ಸೇರಿದಂತೆ ಪ್ರಮುಖ ನಾಯಕರು ಈ ಮೀಸಲಾತಿ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.


















































