ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ತಕ್ಷಣ ಡಿ.ಕೆ.ಶಿವಕುಮಾರ್ ಅವರ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಿಬಿಐ ತನಿಖೆ ಮುಂದುವರೆಯುವ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಅವರು ತಡಮಾಡದೆ ರಾಜೀನಾಮೆ ಸಲ್ಲಿಸಬೇಕು. ಸಿಬಿಐ ತನಿಖೆ ನಡೆಯಲಿದೆ. ಉನ್ನತ ಹುದ್ದೆಯಲ್ಲಿರುವ ಡಿ.ಕೆ.ಶಿವಕುಮಾರರು ಸಾಕ್ಷ್ಯಾಧಾರಗಳನ್ನು ಮುಚ್ಚಿ ಹಾಕುವ ಎಲ್ಲ ಸಾಧ್ಯತೆ- ಸಂದರ್ಭಗಳಿವೆ. ಅವರು ಪ್ರಭಾವಿ ವ್ಯಕ್ತಿಯಾದ ಕಾರಣ ಸಾಕ್ಷಿ ನಾಶ ಮಾಡುವ ಸಾಧ್ಯತೆ ಎದ್ದು ಕಾಣುತ್ತದೆ ಎಂದರು.
ಶಿವಕುಮಾರ್ ಅವರು ರಾಜೀನಾಮೆ ಕೊಡದಿದ್ದರೆ ಸಿಎಂ ಅವರ ರಾಜೀನಾಮೆ ಪಡೆಯಲಿ. ಇಲ್ಲವಾದರೆ ನಾವು ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಕೊಡದಿದ್ದರೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಕೊಟ್ಟು ಒತ್ತಾಯಿಸಲಿದ್ದೇವೆ ಎಂದು ವಿವರಿಸಿದರು.
ಹೈಕೋರ್ಟಿನಲ್ಲಿ ಒಂದು ಆದೇಶ ಹೊರಗೆ ಬಂದಿದೆ. ಡಿಸಿಎಂ ಡಿ.ಕೆ.ಶಿವಕುಮಾರರ ವಿರುದ್ಧ ಸಿಬಿಐನಲ್ಲಿ ದಾಖಲಾಗಿದ್ದ ಕೇಸಿನ ತನಿಖೆ ಮಾಡಲು ತಡೆಯಾಜ್ಞೆ ತಂದಿದ್ದರು. ಇವತ್ತು ಆ ತಡೆಯಾಜ್ಞೆ ತೆರವುಗೊಳಿಸಿ ತನಿಖೆ ಮುಂದುವರೆಸಲು ಹೈಕೋರ್ಟ್ ಆದೇಶ ಕೊಟ್ಟಿದೆ ಎಂದು ತಿಳಿಸಿದರು. ಇದರಿಂದ ಇವತ್ತು ನ್ಯಾಯಕ್ಕೆ ಬೆಲೆ ಸಿಕ್ಕಿದೆ. ಈ ಆದೇಶದಿಂದ ಡಿ.ಕೆ.ಶಿವಕುಮಾರರಿಗೆ ಹಿನ್ನಡೆ ಆಗಿರಬಹುದು ಅಥವಾ ಬೇಸರ ಆಗಿರಬಹುದು. ಆದರೆ, ಸಿದ್ದರಾಮಯ್ಯರಿಗೆ ತುಂಬ ಖುಷಿಯಾಗಿದೆ. ಸಿದ್ದರಾಮಯ್ಯರನ್ನು ಹೇಗಾದರೂ ಮನೆಗೆ ಕಳುಹಿಸಿ ನಾನು ಸಿಎಂ ಆಗಬೇಕೆಂದು ಡಿ.ಕೆ.ಶಿವಕುಮಾರ್ ಪ್ರಯತ್ನ, ಈತ ಹೇಗಾದರೂ ಮತ್ತೆ ಜೈಲಿಗೆ ಹೋದರೆ ನನಗೆ ಅನುಕೂಲ ಎಂದು ಮಾನ್ಯ ಮುಖ್ಯಮಂತ್ರಿಗಳು ಹೇಳುತ್ತಿರುವುದಾಗಿ ನಿನ್ನೆವರೆಗೂ ಮಾತುಗಳು ಕೇಳಿಸಿದ್ದವು. ಇವತ್ತು ಸಿದ್ದರಾಮಯ್ಯನವರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಕಾಣುತ್ತಿದೆ ಎಂದರು.







































































