ದೆಹಲಿ: ಕಳೆದ 21 ದಿನಗಳಲ್ಲಿ, ಅಮರನಾಥ ಯಾತ್ರೆಯು 3 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳ ಸಮಾಗಮಕ್ಕೆ ಸಾಕ್ಷಿಯಾಗಿದೆ. ಸವಾಲಿನ ಹವಾಮಾನದ ನಡುವೆಯೂ ಶುಕ್ರವಾರ 13,797 ಯಾತ್ರಿಗಳು ಪವಿತ್ರ ಗುಹೆಯೊಳಗೆ ‘ದರ್ಶನ’ ಹೊಂದಲು ಸಾಧ್ಯವಾಗಿದ್ದು, ಇದು ದಾಖಲೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ, ಶನಿವಾರ 2,731 ಪುರುಷರು, 663 ಮಹಿಳೆಯರು, 12 ಮಕ್ಕಳು, 63 ಸಾಧುಗಳು, ಮೂವರು ಸಾಧ್ವಿಗಳು ಮತ್ತು ಮೂವರು ತೃತೀಯಲಿಂಗಿಗಳು ಸೇರಿದಂತೆ 3,475 ಯಾತ್ರಿಗಳನ್ನು ಒಳಗೊಂಡ ಬೆಂಗಾವಲು ಪಡೆ ಸೂಕ್ತ ಮಾರ್ಗದರ್ಶನದಲ್ಲಿ ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಕಣಿವೆಯತ್ತ ಹೊರಟಿದೆ.
ಹಿಮಾಲಯದ ಗುಹೆ ದೇವಾಲಯವನ್ನು ಸಮೀಪಿಸಲು ಎರಡು ಪ್ರಾಥಮಿಕ ಮಾರ್ಗಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ದಕ್ಷಿಣ ಕಾಶ್ಮೀರ-ಪಹಲ್ಗಾಮ್‌ನಿಂದ ಸರಳ ದಾರಿ ಮೂಲಕ ಪಹಲ್ಗಾಮ್ ಬೇಸ್ ಕ್ಯಾಂಪ್‌ನಿಂದ ಸುಮಾರು 43 ಕಿಮೀ ಚಾರಣವನ್ನು ಕೈಗೊಳ್ಳಬೇಕಿದೆ. ಗುಹಾ ದೇವಾಲಯವನ್ನು ತಲುಪಲು ಮೂರರಿಂದ ನಾಲ್ಕು ದಿನಗಳು ಬೇಕಾಗುತ್ತವೆ. ಮತ್ತೊಂದೆಡೆ, ಉತ್ತರ ಕಾಶ್ಮೀರ ಬಾಲ್ಟಾಲ್ ಬೇಸ್ ಕ್ಯಾಂಪ್ ಮಾರ್ಗವು 13 ಕಿಮೀ ಹತ್ತುವಿಕೆ ಚಾರಣವನ್ನು ಒಳಗೊಂಡಿರುತ್ತದೆ. ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿರುವ ಗುಹಾ ದೇವಾಲಯದ ಒಳಗೆ ‘ದರ್ಶನ’ ಮಾಡಿದ ನಂತರ ಅದೇ ದಿನ ಬೇಸ್ ಕ್ಯಾಂಪ್‌ಗೆ ಹಿಂತಿರುಗಬಹುದು.
ಅನುಕೂಲಕ್ಕಾಗಿ, ಎರಡೂ ಮಾರ್ಗಗಳಲ್ಲಿ ಯಾತ್ರಿಗಳಿಗೆ ಹೆಲಿಕಾಪ್ಟರ್ ಸೇವೆಗಳು ಲಭ್ಯವಿದೆ. ಗುಹೆ ದೇವಾಲಯವು ಐಸ್ ಸ್ಟಾಲಗ್ಮೈಟ್ ರಚನೆಯನ್ನು ಹೊಂದಿದೆ, ಇದು ಶಿವನ ಪೌರಾಣಿಕ ಶಕ್ತಿಯನ್ನು ಸಂಕೇತಿಸುತ್ತದೆ ಎಂಬುದು ಭಕ್ತರ ನಂಬಿಕೆ.
62 ದಿನಗಳ ಕಾಲ ನಡೆಯುವ ಅಮರನಾಥ ಯಾತ್ರೆಯು ಜುಲೈ 1 ರಂದು ಪ್ರಾರಂಭವಾಗಿ ಆಗಸ್ಟ್ 31 ರಂದು ಶ್ರಾವಣ ಪೂರ್ಣಿಮಾ ಹಬ್ಬದೊಂದಿಗೆ ಸಮಾರೋಪಗೊಳ್ಳಲಿದೆ.