ಬೆಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಜೈನ ಮುನಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ. ಈ ಹತ್ಯೆಯ ಸಮಗ್ರ ತನಿಖೆ ನಡೆಸಬೇಕು. ಕೊಲೆಗಡುಕರನ್ನು ಶೀಘ್ರವೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುನಿಗಳ ಹತ್ಯೆ ಮನಸ್ಸಿಗೆ ಅತ್ಯಂತ ಅಘಾತ ತಂದಿದೆ ಎಂದು ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಾಡಿನ ಸಾಧು ಸಂತರಿಗೆ ರಕ್ಷಣೆ ಒದಗಿಸುವಂತೆ ಅವರು ಆಗ್ರಹಿಸಿದ್ದಾರೆ. ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.
ಸಾಧು, ಸಂತರು ಶಾಂತಿಪ್ರಿಯರು. ದೇಶದ ಒಳಿತು. ಸಂಸ್ಕಾರ, ಸನಾತನ ಧರ್ಮದ ವಿಚಾರವಾಗಿ ಮಾರ್ಗದರ್ಶನ ನೀಡುವವರು. ಅಂತಹ ಸಂತರನ್ನು ಹೇಯವಾಗಿ ಕೊಲೆ ಮಾಡಿರುವುದನ್ನು ಸಮಾಜ ಒಪ್ಪಲು ಸಾಧ್ಯವೇ ಇಲ್ಲ ಎಂದು ನಳಿನ್ ಕುಮಾರ್ ಕಟೀಲ್ ಅವರು ಅಭಿಪ್ರಾಯಪಟ್ಟಿದ್ದಾರೆ.