ಬೆಂಗಳೂರು: ನಿಷ್ಠೂರ ಐಎಎಸ್ ಅಧಿಕಾರಿ ಎಂದೇ ಬಿಂಬಿತವಾಗಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ.
ಜನ ಸಾಮಾನ್ಯರ ಕೆಲಸಗಳಿಗೆ ಈ ಕಚೇರಿಯ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿತ್ತು. ಅದಾಗಿಯೂ ಇತ್ತೀಚಿನ ವರ್ಷಗಳಲ್ಲಿ ನಿಯುಕ್ತಿಯಾದ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅವರು ಕೆಲವೊಂದು ಕಠಿಣ ನಿಲುವು ಅನುಸರಿಸಿ ಜನಸಾಮಾನ್ಯರ ಕೆಲಸಗಳಿಗೆ ವೇಗ ನೀಡಿದ್ದರಾದರೂ ಬಹುತೇಕ ಅಧಿಕಾರ ಡಿಸಿ ಹಿಡಿತದಲ್ಲಿತ್ತು. ಆದರೆ ಕಳೆದ 7 ತಿಂಗಳ ಹಿಂದೆ ಹೊಸದಾಗಿ ಡಿಸಿಯಾಗಿ ಬಂದ ರವಿಕುಮಾರ್ ಅವರು ಸೋಮಾರಿ ಅಧಿಕಾರಿಗಳ ಚಳಿ ಬಿಡಿಸುವಲ್ಲಿ ಯಶಸ್ವಿಯಾಗಿದ್ದರು.
ಡಿಸಿ-ಎಡಿಸಿ ಜೋಡೆತ್ತುಗಳು..!
ಜಿಲ್ಲಾಧಿಕಾರಿ ರವಿಕುಮಾರ್ ಹಾಗೂ ಎಡಿಸಿ ಕೃಷ್ಣಮೂರ್ತಿ ಅವರ ಜಂಟಿ ಕ್ರಮಗಳು ಹಾಗೂ ನಿಷ್ಟುರ ನಡೆಯಿಂದ ಕೆರಳಿದ್ದ ನೌಕರರು ರಾಜ್ಯ ಸರ್ಕಾರಕ್ಕೆ ದೂರುಗಳನ್ನು ನೀಡಿದ್ದರೂ ಈ ಜೋಡಿ ಅಧಿಕಾರಿಗಳು ಜಪ್ಪೆನ್ನಲಿಲ್ಲ.
ಈ ನಡುವೆ, ಚುನಾವಣೆ ಸಂದರ್ಭದಲ್ಲಿ ಕೆಲವು ರೌಡಿಗಳ ಗಡಿಪಾರು ಸಂಬಂಧ ಕೈಗೊಂಡ ತೀರ್ಮಾನ ಹಾಗೂ ಸಾರ್ವಜನಿಕರ ದೂರಿಗೆ ಸ್ಪಂಧಿಸಿ ಕಾಂಗ್ರೆಸ್ ನಾಯಕರ ಕಾರ್ಖಾನೆಗಳ ವಿರುದ್ದ ನಿಷ್ಟೂರ ಕ್ರಮ ಕೈಗೊಂಡ ಜಿಲ್ಲಾಧಿಕಾರಿ ರವಿಕುಮಾರ್ ಅವರು ಅಲ್ಪಾವಧಿಯಲ್ಲೇ ವರ್ಗಾವಣೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯನ್ನು ಜನಸ್ನೇಹಿಯನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಡಿಸಿ ರವಿಕುಮಾರ್ ಅವರನ್ನು ನಿಯಮಬಾಹಿರವಾಗಿ ರಾಜ್ಯ ಸರ್ಕಾರದ ವರ್ಗಾವಣೆ ಮಾಡಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಪ್ರತಿಧ್ವನಿಸಿದೆ. ಇದೀಗ ಡಿಸಿಯನ್ನು ಎತ್ತಂಗಡಿ ಮಾಡಿದ್ದೀರಿ, ಮತ್ತೊಬ್ಬ ಜನಸ್ನೇಹಿ ಅಧಿಕಾರಿ ಎಡಿಸಿ ಕೃಷ್ಣಮೂರ್ತಿ ಅವರನ್ನೂ ವರ್ಗಾಯಿಸುವ ಪ್ರಯತ್ನ ಮಾಡಬೇಡಿ ಎಂದು ಸಾರ್ವಜನಿಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.