ಬೆಂಗಳೂರು: ದೊಡ್ಡಬಳ್ಳಾಪುರ ನಗರದ ತಾಲ್ಲೂಕು ಕಚೇರಿ ರಸ್ತೆಯಲ್ಲಿರುವ ಇಂಡಿಯನ್ ಓವರಸೀಸ್ ಬ್ಯಾಂಕಿನ ಮ್ಯಾನೇಜರ್ ಕನ್ನಡದಲ್ಲಿ ವ್ಯವಹಾರಿಸದೆ, ದರ್ಪ ಮೆರೆದು ಬ್ಯಾಂಕಿನ ಗ್ರಾಹಕ ನೀಡಿದ ಚೆಕ್ ಅನ್ನು ಬಿಸಾಡಿ ಕನಿಷ್ಟ ಗೌರವದಿಂದ ನಡೆದುಕೊಳ್ಳದೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಕರವೇ (ಕನ್ನಡಿಗರ ಬಣ) ಅಧ್ಯಕ್ಷ ಚಂದ್ರಶೇಖರ್ ಬ್ಯಾಂಕ್ ಮುಂಭಾಗ ಬಾಗಿಲಿನಲ್ಲೇ ಕುಳಿತು ಪ್ರತಿಭಟನೆ ಮಾಡಿದ ಪ್ರಸಂಗ ಸೋಮವಾರ ನಡೆದಿದೆ.
ಚಂದ್ರಶೇಖರ್ ಖುದ್ದು ನಾನೇ ಎರಡು ಲಕ್ಷ ರೂಪಾಯಿಯ ಚೆಕ್ ಡ್ರಾ ಮಾಡಿಕೊಳ್ಳಲು ಬ್ಯಾಂಕಿಗೆ ಬಂದೆ. ಬ್ಯಾಂಕಿನ ಮ್ಯಾನೇಜರ್ ಅವರು ಈ ಬ್ರಾಂಚ್ ನಲ್ಲಿ ಹಣ ಇಲ್ಲ. ನೀವು ಮತ್ತೊಂದು ಇಂಡಿಯನ್ ಓವರ್ಸೀಸ್ ಬ್ಯಾಂಕ್ ಶಾಖೆಗೆ ಹೋಗಿ ಡ್ರಾ ಮಾಡಿಕೊಳ್ಳಿ ಎಂದು ಉಢಾಫೆಯಾಗಿ ಉತ್ತರಿಸಿದರು. ಬಳಿಕ ನಾನು ಕನ್ನಡದಲ್ಲಿ ಮಾತನಾಡಿ ಎಂದು ಆಗ್ರಹಿಸಿದಾಗ ಕೈನಲ್ಲಿದ್ದ ಚೆಕ್ ಅನ್ನು ಬಿಸಾಡಿದ್ದಾರೆ. ಕನ್ನಡಕ್ಕೆ ಅಪಮಾನ ಮಾಡಿದ್ದಾರೆ. ಹೀಗಾಗಿ ಕರವೇ ಪದಾಧಿಕಾರಿಗಳು ಬ್ಯಾಂಕಿನ ದುರಹಂಕಾರಿ ಸಿಬ್ಬಂದಿಯ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಕೇಂದ್ರ ಸರ್ಕಾರದ ನಿಯಮಾನುಸಾರವೇ ಕನ್ನಡ ಭಾಷೆಯನ್ನು ಕಲಿತು ವ್ಯವಹಾರ ಮಾಡಬೇಕು. ಕನಿಷ್ಟ ಕನ್ನಡ ಕಲಿಯಲು ಆಸಕ್ತಿ ವಹಿಸಬೇಕು. ಕನ್ನಡ ಮಾತನಾಡಿ ಎಂದಿದ್ದಕ್ಕೆ ಇಷ್ಟೇಲ್ಲಾ ರಗಳೆ ಮಾಡಿರುವುದಕ್ಕೆ ಮ್ಯಾನೇಜರ್ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದರು.
ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬ್ಯಾಂಕ್ ಮ್ಯಾನೇಜರ್ ಪ್ರತಿಭಟನಾ ನಿರತರೊಂದಿಗೆ ಕ್ಷಮೆಯಾಚನೆ ಮಾಡಿ ಒಂದೆರಡು ತಿಂಗಳಲ್ಲಿ ಕನ್ನಡ ಭಾಷೆ ಕಲಿಯುತ್ತೇನೆ ಎಂದು ತಿಳಿಸಿದರು. ಇದರಿಂದ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.
























































