ಬೆಂಗಳೂರು: ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆದೀತು ಎಂಬುದಕ್ಕೆ ರಾಜ್ಯದ ವ್ಯವಸ್ಥೆ ಸಾಕ್ಷಿಯಾಗುತ್ತಿದೆ. ಯು.ಟಿ.ಖಾದರ್ ಅವರನ್ನು ಸ್ಲೀಕರ್ ಮಾಡುವ ಮೂಲಕ ಖರ್ಗೆಯವರ ಗರಡಿಯಲ್ಲಿನ ನಾಯಕ ಸಂಪುಟಕ್ಕೆ ಸೇರಲು ಅವಕಾಶ ಸಿಕ್ಕಿದಂತಾಗಿದೆ. ಇದೀಗ ಮತ್ತೊಂದು ಅಚ್ಚರಿಯ ಬೆಳವಣಿಗೆಗೂ ‘ಕೈ’ ಪಾಳಯ ಸಾಕ್ಷಿಯಾಗಲಿದೆ.
ಬಿಹೆಪಿ ನಾಯಕರಿಗೆ ಮುಜುಗರದ ಸನ್ನಿವೇಶ ಸೃಷ್ಟಿಸಲು ಖಾದರ್ ಆಯ್ಕೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಮಲ ಪಕ್ಷವನ್ನು ಕಟ್ಟಿ ಹಾಕಲು ‘ರೈ’ಗೆ ಮಣೆ.. ರಹಸ್ಯವಾಗಿಯೇ ರಣವ್ಯೂಹ ರಚಿಸುತ್ತಿರುವ ಕಾಂಗ್ರೆಸ್ ಪಕ್ಷವು ರಮಾನಾಥ ರೈ ಅವರನ್ನು ಮೇಲ್ಮನೆಗೆ ಕಳುಹಿಸುವ ಪ್ರಯತ್ನದಲ್ಲಿದೆ.
ಇದು ಅಚ್ಚರಿ ಅನ್ನಿಸಿದರೂ ನಿಜ..!
ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಐದನೇ ಬಾರಿಗೆ ಶಾಸಕರಾಗಿರುವ ಯು.ಟಿ.ಖಾದರ್ ಅವರನ್ನು ಇದೀಗ ಸ್ಪೀಕರ್ ಮಾಡಲಾಗಿದೆ. ಕಾಂಗ್ರೆಸ್ ನಾಯಕರ ಈ ನಿರ್ಧಾರದ ಹಿಂದೆ ಎರಡು ಪ್ರಮುಖ ಉದ್ದೇಶ ಇದೆ. ಮೊದಲನೇಯದ್ದು ಹಿಂದೂತ್ವ ಪ್ರಾಬಲ್ಯದ ನಾಡಿನ ಬಿಜೆಪಿ ನಾಯಕರು ಸ್ಪೀಕರ್ ಸ್ಥಾನದಲ್ಲಿರುವ ಮುಸ್ಲಿಂ ನಾಯಕನಿಗೆ ತಲೆಬಾಗಲೇಬೇಕಾದ ಅನಿವಾರ್ಯತೆ ಸೃಷ್ಟಿಸುವುದು. ಇನ್ನೊಂದು, ಖರ್ಗೆ ಕುಟುಂಬದ ಕಾಸಾ ಮಂಜುನಾಥ್ ಭಂಡಾರಿಗೆ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಹಾದಿ ಸುಗಮಗೊಳಿಸುವುದಾಗಿತ್ತು.
ಖರ್ಗೆ ಗುಂಪಿನ ಲೆಕ್ಕಾಚಾರವನ್ನು ಸಿದ್ದರಾಮಯ್ಯ ಸೈನ್ಯದ ರಹಸ್ಯ ಕಾರ್ಯತಂತ್ರವು ಬುಡಮೇಲು ಮಾಡಿದೆಯೇ ಎಂಬ ಅನುಮಾನ ಕೂಡಾ ಕಾಂಗ್ರೆಸ್ಸಿಗರನ್ನು ಕಾಡತೊಡಗಿದೆ. ಖರ್ಗೆಯವರಿಗೆ ಹಿರಿತನದಲ್ಲೂ ಸಮಾನರಾಗಿರುವ ನಾಯಕರೆನಿಸಿರುವ ಬಿ.ರಮಾನಾಥ ರೈ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಉನ್ನತ ಹುದ್ದೆ ನೀಡುವ ಚಿಂತನೆ ನಡೆದಿದೆ. ಈ ಪ್ರಯತ್ನವೂ ಕರಾವಳಿಯಲ್ಲಿ ಬಿಜೆಪಿಯನ್ನು ಕಟ್ಟಿಹಾಕುವ ಪ್ರಯತ್ನದ ಮತ್ತೊಂದು ಭಾಗವೇ ಆಗಿದೆ. ಬಂಟ ಸಮುದಾಯವನ್ನು ಕಾಂಗ್ರೆಸ್ ಪಕ್ಚದತ್ತ ಸೆಳೆಯುವ ಉದ್ದೇಶದಿಂದ ಅದೇ ಸಮುದಾಯದ ಮುಖಂಡರಾದ ರಮಾನಾಥ ರೈ ಅವರ ಪ್ರಾಬಲ್ಯವನ್ನು ಹೆಚ್ಚಿಸುವ ಪ್ರಯತ್ನವಿದು.
ಈ ಬಾರಿಯ ಚುನಾವಣೆಯಲ್ಲಿ ರೈ ಸೋತಿದ್ದರೂ ಇದೀಗ ಖಾಲಿ ಇರುವ ಮೇಲ್ಮನೆ ಸ್ಥಾನಕ್ಕೆ ಅವರನ್ನು ಆಯ್ಕೆಮಾಡಿ, ಪ್ರಬಲ ಬಂಟ ಸಮುದಾಯಕ್ಕೆ ಮಂತ್ರಿಗಿರಿ ನೀಡುವ ಯೋಚನೆ ಸಿದ್ದು ಬಳಗದ್ದು. ಈ ತಂತ್ರಗಾರಿಕೆಗೆ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸುರ್ಜೇವಾಲಾ ಅವರೂ ಸೈ ಎಂದಿದ್ದಾರೆ ಎನ್ನಲಾಗಿದೆ.
ಚುನಾವಣೆಗಷ್ಟೇ ಗುಡ್ ಬೈ; ಪರಿಷತ್‌ಗೆ ಅಲ್ಲ!?
ಕೆಲವು ದಿನಗಳ ಹಿಂದೆ ಬಂಟ್ವಾಳ ಕ್ಷೇತ್ರದಲ್ಲಿ ಸೋತಿರುವ ರಮಾನಾಥ ರೈ ಅವರು ಚುನಾವಣಾ ರಾಜಕಾರಣಕ್ಕೆ ಗುಡ್ ಬೈ ಹೇಳಿದ್ದರು. ಆದರೆ ಈ ನಿರ್ಧಾರವು ಮೇಲ್ಮನೆ ವಿಷಯಕ್ಕೆ ಅನ್ವಯಿಸಲ್ಲ ಎಂದೂ ಹೇಳಿದ್ದರು. ಹಾಗಾಗಿ ಬಯಸದೆಯೇ ಸೌಭಾಗ್ಯ ತನ್ನನ್ನರಸಿ ಬಂದಲ್ಲಿ ಬೇಡ ಎನ್ನುವವರೂ ರೈ ಅಲ್ಲ. ಹಾಗಾಗಿ ರಮಾನಾಥ ರೈ ಅವರಿಗೆ ಪರಿಷತ್ ಸದಸ್ಯತ್ವ ಒದಗಿ ಬಂದು ಸಚಿವ ಸ್ಥಾನವೂ ಸಿಕ್ಕಿದಲ್ಲಿ ಕರಾವಳಿಯ ಬಂಟರ ಪಾಳಯದಲ್ಲಿ ಸಂಚಲನ ಸೃಷ್ಟಿಸಿಯಾಗುವುದಂತೂ ಖಚಿತ.