ದೊಡ್ಡಬಳ್ಳಾಪುರ: ಸರಣಿ ಸರಗಳ್ಳತನ ಪ್ರಕರಣಗಳನ್ನು ಸವಾಲಾಗಿ ಸ್ವೀಕರಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ಖದೀಮರಿಗಾಗಿ ಭರ್ಜರಿ ಬೇಟೆಯಾಡಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ಅಧೀಕ್ಷಕ ಪುರುಷೋತ್ತಮ್, ಡಿವೈಎಸ್ಪಿ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ದೊಡ್ಡಬಳ್ಳಾಪುರ ನಗರ ಠಾಣೆ ಇನ್ಸ್ಪೆಕ್ಟರ್ ಪ್ರೀತಂ ಶ್ರೇಯಕರ ಮತ್ತು ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ನಂಜುಂಡಯ್ಯ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಸರಗಳ್ಳರ ಗ್ಯಾಂಗನ್ನು ಸೆರೆಹಿಡಿದಿದ್ದಾರೆ.
ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ದೊಡ್ಡಬಳ್ಳಾಪುರ ತಾಲೂಕಿನ ಗೆದ್ದಲಹಳ್ಳಿ ಗ್ರಾಮದ ಆಟೋ ಚಾಲಕರಾದ ಆರ್.ಸುಬ್ರಹ್ಮಣ್ಯ (24 ವರ್ಷ), ಎನ್.ಪ್ರವೀಣ್ ಕುಮಾರ್ (19 ವರ್ಷ), ಹಾಗೂ ಪಾಲನಜೋಗಿಹಳ್ಳಿ ನಿವಾಸಿ Zomato ಕಂಪನಿಯ ವಿತರಣೆಗಾರ ಎನ್.ಅಭಿಲಾಷ್ (19 ವರ್ಷ) ಎನ್ನುವವರನ್ನು ಬಂಧಿಸಿರುವ ಪೊಲೀಸರು ಹಲವು ಪ್ರಕರಣಗಳನ್ನು ಬೇಧಿಸಿದ್ದಾರೆ.
ಬಂಧಿತರಿಂದ ವಿವಿಧೆಡೆ ನಾಲ್ಕು ಪ್ರಕರಣದಲ್ಲಿ ನಡೆಸಲಾಗಿದ್ದ 130ಗ್ರಾಂ ತೂಕದ ನಾಲ್ಕು ಚಿನ್ನದ ಮಾಂಗಲ್ಯ ಸರ, ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿದ್ದಾರೆ.
ಪೊಲೀಸ್ ಕಾರ್ಯಾಚರಣೆಯಲ್ಲಿ ದೊಡ್ಡಬಳ್ಳಾಪುರ ನಗರ ಠಾಣೆಯ ಸಿಬ್ಬಂದಿ ಪಾಂಡುರಂಗ, ಕರಾರ್ ಹುಸೇನ್, ವಸಂತಕುಮಾರ್, ಸುನಿಲ್ ಭಾಸಗಿ, ಹುಸೇನ್ ಸಾಭ್ ಕಂಕುರಿ, ಯೋಗಶ್ರೀ ಮೊದಲಾದವರು ಸಾಥ್ ನೀಡಿದ್ದರು.