‘ದೊಡ್ಡಬಳ್ಳಾಪುರ- ವಿಧಾನಸಭಾ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಹೋರಾಟ ನಡೆದಿದೆ. ಸಮೀಕ್ಷೆಗಳೂ ಬಗೆಬಗೆಯ ಲೆಕ್ಕಾಚಾರಕ್ಕೆ ಎಡೆಮಾಟಿಕೊಟ್ಟಿದೆ. ಈ ನಡುವೆ ದೊಡ್ಡಬಳ್ಳಾಪುರ ಇದೀಗ ಭರ್ಜರಿ ”ಆಪರೇಷನ್ ಹಸ್ತ’ಕ್ಕೆ ಸಾಕ್ಷಿಯಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಪ್ರಭಾವಿ ಮುಖಂಡ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಸ್. ವಿರೂಪಾಕ್ಷಯ್ಯ ಸೇರಿದಂತೆ ಆರು ಮಂದಿ ಶನಿವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು.
30 ವರ್ಷಗಳಿಗೂ ಹೆಚ್ಚು ಅವಧಿಯಿಂದ ಬಿಜೆಪಿ ಪಕ್ಷ ಸಂಘಟನೆ ಮಾಡಿದ್ದ ವಿರೂಪಾಕ್ಷಯ್ಯ ಅವರು ಪಕ್ಷದ ಇತ್ತೀಚಿನ ಧೋರಣೆಗಳಿಂದ ಬೇಸತ್ತು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಚುಂಚೇಗೌಡ ಹಾಗೂ ಶಾಸಕ ಟಿ.ವೆಂಕಟರಮಣಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಹಾಗೂ ಜಿ.ಪಂ.ಮಾಜಿ ಸದಸ್ಯ ಚುಂಚೇಗೌಡ ಮಾತನಾಡಿ, ಬಿಜೆಪಿ ಅಭ್ಯರ್ಥಿ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಪ್ರಯತ್ನಿಸಿರುವುದು ಈಗಾಗಲೇ ಬಹಿರಂಗವಾಗಿದೆ. ಪ್ರತಿ ಹೋಬಳಿಯಲ್ಲಿ ತಲಾ 50 ಮಂದಿ ಅನ್ಯ ಜಿಲ್ಲೆಗಳಿಂದ ಕರೆತಂದು, ಅವರ ಕಡೆಯಿಂದ ಮತದಾರರಿಗೆ ಆಮಿಷವೊಡ್ಡಲಾಗುತ್ತಿದೆ. ಮತದಾರರು ಪ್ರಜ್ಞಾವಂತರಾಗಿದ್ದು, ಬಿಜೆಪಿಯವರ ಆಮಿಷಕ್ಕೆ ಬಗ್ಗುವುದಿಲ್ಲ. ಬಿಜೆಪಿಯೆಂದರೆ ಬರೀ ಸುಳ್ಳು. ಈಗಿರುವ ಅಭ್ಯರ್ಥಿಗಳು ನಮ್ಮ ತಾಲೂಕಿನವರಲ್ಲ. ಇವರಿಗೆ ತಾಲೂಕಿನ ಯಾವ ಮೂಲೆಯಲ್ಲಿ ಯಾವ ಹಳ್ಳಿಯಿದೆ ಎಂಬುದು ಗೊತ್ತಿಲ್ಲ. ಹಾಗಾಗಿ ಯಾರನ್ನು ಆಯ್ಕೆ ಮಾಡಬೇಕೆಂಬುದು ತಾಲೂಕಿನ ಜನತೆಗೆ ಗೊತ್ತಿದೆ ಎಂದರು.
ಎಪಿಎಂಸಿ ಮಾಜಿ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಶಾಸಕರಾದ ವೆಂಕಟರಮಣಯ್ಯ ಅವರ ಕಾರ್ಯವೈಖರಿ, ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಹಲವಾರು ಮುಖಂಡರು ಬಿಜೆಪಿ ತೊರೆದು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಬೇರೆ ಬೇರೆ ರಾಜ್ಯಗಳಿಂದ ಜನರನ್ನು ಕರೆತಂದು ಕ್ಯೂಆರ್‌ಕೋಡ್ ಇರುವ ಕೂಪನ್ ಹಂಚಿಕೆ ಮಾಡಿ ಮತದಾರರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕ್ಯೂಆರ್‌ಕೋಡ್ ಅನ್ನು ಡಿ ಕೋಡ್ ಮಾಡಿದಾಗಲೆ ಅದರ ಬಣ್ಣ ಬಯಲಾಗುತ್ತೆ. ಈಗಾಗಲೇ ಕ್ಯೂಆರ್‌ಕೋಡ್ ಕೂಪನ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಶೀಘ್ರದಲ್ಲೇ ಬಣ್ಣ ಬಯಲಾಗುತ್ತೆ. ಕರ್ನಾಟಕ ರಾಜ್ಯದಲ್ಲಿ ಈ ರೀತಿ ಪ್ರಯೋಗ ಎಲ್ಲೂ ಆಗಿಲ್ಲ. ಕ್ಯೂಆರ್‌ಕೋಡ್ ಬಳಕೆ ಮಾಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ವಿರುಪಾಕ್ಷಯ್ಯ ಮಾತನಾಡಿ, 30 ವರ್ಷಗಳಿಂದ ಸೈಕಲ್ ತುಳಿದು ಪಕ್ಷ ಸಂಘಟನೆ ಮಾಡಿದ್ದೇವೆ. ಈಗಿರುವ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಅವರು, ಮೂಲ ಬಿಜೆಪಿಗರನ್ನು ಹೀನಾಮಾನವಾಗಿ ಕಾಣುತ್ತಿದ್ದಾರೆ, ಬೇಸತ್ತು ಪಕ್ಷ ತೊರೆದಿದ್ದೇನೆ. ಕಾಂಗ್ರೆಸ್ ಶಾಸಕರು ಗ್ರಾಮದ ಕೊಂಡದಮ್ಮ ದೇವಾಲಯಕ್ಕೆ ಅನುದಾನ ಕೊಡಿಸಿದ್ದಾರೆ. ಸಹೋದರ ಅನಾರೋಗ್ಯಕ್ಕಿಡಾದ ವೇಳೆ ವೈಯಕ್ತಿಕ ನೆರವು ನೀಡಿದ್ದಾರೆ. ಶಾಸಕರ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ದಲಿತರು, ಅಲ್ಪಸಂಖ್ಯಾತರು ಶಾಂತಿಯಿಂದ ಜೀವನ ನಡೆಸುತ್ತಿದ್ದಾರೆ ಎಂದರು.
ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ನಮ್ಮ ಹೋಬಳಿಯಲ್ಲಿ ಶಾಸಕರು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ಎಲ್ಲೂ ಭ್ರಷ್ಟಾಚಾರ ನಡೆಸಿಲ್ಲ, ಭೂಮಾಫಿಯಾ ಜೊತೆ ಕೈ ಜೊಡಿಸಿಲ್ಲ. ಜಮೀನು ಕೊಂಡುಕೊಂಡಿಲ್ಲ, ಸಹಾಯ ಬೇಡಿ ಬಂದ ಬಡವರಿಗೆ ತಕ್ಷಣ ಸ್ಫಂದಿಸುತ್ತಾರೆ. ವೆಂಕಟರಮಣಯ್ಯ ಅವರು ಇದೇ ತಾಲ್ಲೂಕಿನಲ್ಲಿ ಹುಟ್ಟಿ ಬೆಳೆದ ತಾಲ್ಲೂಕಿನ ಮಗನಾಗಿದ್ದಾರೆ, ಶಾಸಕರು ನಡೆಸಿದ ಅಭಿವೃದ್ಧಿ ಕೆಲಸಗಳ ಮೇಲೆ ಮತ ಕೇಳುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಇಬ್ಬರೂ ಹೊರಗಿನಿಂದ ಬಂದವರು, ಹಣ ಬಲದ ಮೇಲೆ ಮತದಾರರನ್ನು ಕೊಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಇಲ್ಲಿಯ ತನಕ ಹೊರಿಗಿನವರನ್ನು ಗೆಲ್ಲಿಸಿದ ಇತಿಹಾಸವಿಲ್ಲ ಎಂದರು.
ಶಾಸಕರ ಅಭಿವೃದ್ಧಿ ಕೆಲಸಗಳನ್ನು ಕಂಡು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ ನೂರಾರು ಮುಖಂಡರು ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ, ಇನ್ನೂ ಬರುವವರು ಇದ್ದಾರೆ. ನಾವು ಯಾವ ಕಾರ್ಯಕರ್ತರಿಗೂ ಹಣ ಕೊಟ್ಟಿಲ್ಲ, ಸ್ವಂತ ಹಣ ವೆಚ್ಚ ಮಾಡಿ ಮನೆ ಮನೆಗೆ ಪ್ರಚಾರ ಕಾರ್ಯ ಮಾಡುತ್ತಿದ್ದೇವೆ ಎಂದರು.
ಮಧುರೆ ಹೋಬಳಿ ಮುಖಂಡರಾದ ರೇಣುಕಾ ಪ್ರಸಾದ್, ಬಸವರಾಜು, ಅನಿಲ್, ಶಿವು, ಎಪಿಎಂಸಿ ಮಾಜಿ ಉಪಾಧ್ಯಕ್ಷ ಮಂಜುನಾಥ್ , ಕನಸವಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ವಿಜಯಕುಮಾರ್, ಆರ್.ವಿ.ಗೌಡ, ಎನ್.ವಿಶ್ವನಾಥ ಮೊದಲಾದ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.