ಮಂಗಳೂರು: ವಿಧಾನಸಭಾ ಚುನಾವಣಾ ಕಣದಲ್ಲಿ ಪ್ರಚಾರ ಭರಾಟೆ ಜೋರಾಗಿದ್ದು ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತಬೇಟೆಯಲ್ಲಿ ತಲ್ಲೀನರಾಗಿದ್ದಾರೆ. ಅದರಲ್ಲೂ ಕರಾವಳಿಯಲ್ಲಿ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್ ಹರಸಾಹಸ ನಡೆಸುತ್ತಿದೆ.
ರಾಜಸ್ಥಾನ ಸಿಎಂ ಆಶೋಕ್ ಗೆಹ್ಲಾಟ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಜಿ.ಎ.ಬಾವಾ ಸಹಿತ ಅನೇಕ ನಾಯಕರು ಕರಾವಳಿಯಲ್ಲಿ ಕಾಂಗ್ರೆಸ್‌ಗಾಗಿ ಮತಬೇಟೆ ಕೈಗೊಂಡರು. ಹಿರಿಯ ನಾಯಕ ಅಶೋಕ್ ಗೆಹ್ಲಾಟ್ ಹಾಗೂ ಜಿ.ಎ.ಬಾವಾ ಅವರು ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಜೊತೆ ಚಿಂಥನ-ಮಂಥನ ನಡೆಸಿ, ಕಾರ್ಯಕರ್ತರಿಗೆ ಚೈತನ್ಯ ತುಂಬಿದರು.
ಬಂಟ್ವಾಳದಲ್ಲಿ ‘ಕೈ’ ರಣತಂತ್ರ
ತೀವ್ರ ಕುತೂಹಲದ ಕೇಂದ್ರಬಿಂದುವಾಗಿರುವ ಬಂಟ್ವಾಳ ಕ್ಷೇತ್ರದಲ್ಲಿ ಮತ್ತೊಮ್ಮೆ ಪಾರುಪಥ್ಯಕ್ಕೆ ‘ಕೈ ಸೈನ್ಯ’ ರಣತಂತ್ರ ರೂಪಿಸಿದ್ದಾರೆ. ಘಟಾನುಘಟಿ ನಾಯಕರು ಕಾಂಗ್ರೆಸ್ ಹುರಿಯಾಳು ಬಿ.ರಮಾನಾಥ ರೈ ಪರ ಪ್ರಚಾರ ಕೈಗೊಂಡಿದ್ದಾರೆ. ಮಂಗಳವಾರ ಕೆಪಿಸಿಸಿ ಕಾರ್ಯದರ್ಶಿ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಜಿ.ಎ.ಬಾವಾ ಪ್ರಚಾರ ಕೈಗೊಂಡು ಕುತೂಹಲದ ಕೇಂದ್ರಬಿಂದುವಾದರು. ಬಂಟ್ವಾಳದ ಅಮ್ಮುಂಜೆ, ಕರಿಯಂಗಳ ಸಹಿತ ಹಲವೆಡೆ ಜಿ.ಎ.ಬಾವಾ ಅವರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪ್ರಚಾರ ಕೈಗೊಂಡರು. ಅಲ್ಪಸಂಖ್ಯಾತರೇ ಹೆಚ್ಚಿರುವ ಸ್ಥಳಗಳಲ್ಲಿ ಮತಗಳು ಚದುರಿ ಹೋಗದಂತೆ ಅವರು ಕಾರ್ಯಕರ್ತರೊಂದಿಗೆ ಕಾರ್ಯತಂತ್ರ ಮಾಡಿದರು.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಎ.ಬಾವಾ, ಈ ಬಾರಿ ಕರಾವಳಿ ಜಿಲ್ಲೆಗಳ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದ್ದು, ಬಂಟ್ವಾಳದಲ್ಲೂ ರಮಾನಾಥ ರೈ ಜಯಶಾಲಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪರ ರಾಜ್ಯದ ಜನರಿಗೆ ವಿಶ್ವಾಸ ಹೆಚ್ಚಿದೆ. ಕಾಂಗ್ರೆಸ್ ಗ್ಯಾರೆಂಟಿಯ ಪ್ರಯೋಗ ಈ ಬಾರಿ ಯಶಸ್ವಿಯಾಗಲಿದೆ ಎಂದು ಜಿ.ಎ.ಬಾವಾ ಅವರು ಆಶಾವಾದ ವ್ಯಕ್ತಪಡಿಸಿದರು.