ಬೆಂಗಳೂರು: ‘ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದು ವಿರೋಧ ಪಕ್ಷಗಳ ಟೀಕೆಗಳ ಬಗ್ಗೆ ಲೆಕ್ಕ ನೀಡುತ್ತಿದ್ದಾರೆ. ಅದರ ಬದಲು ಅವರ ಡಬಲ್ ಇಂಜಿನ್ ಸರ್ಕಾರ ರಾಜ್ಯಕ್ಕೆ ನೀಡಿರುವ ಕೊಡುಗೆಗಳ ಲೆಕ್ಕ ಹೇಳಬೇಕಿತ್ತು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಜೆಡಿಎಸ್, ಬಿಜೆಪಿ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಶಿವಕುಮಾರ್, ರಾಜ್ಯಕ್ಕೆ ಪ್ರಧಾನಿಗಳು, ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಬಂದು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ವಿಶ್ವಗುರು ಎಂದೇ ಕರೆದುಕೊಳ್ಳುವ ಮೋದಿ ಅವರು ಅಷ್ಟು ದೊಡ್ಡ ಸ್ಥಾನದಲ್ಲಿದ್ದು, ಅವರು ರಾಜ್ಯಕ್ಕೆ ಬಂದು ಅವರ ವಿರುದ್ಧದ ಟೀಕೆಗಳ ಲೆಕ್ಕ ಹೇಳುತ್ತಿದ್ದಾರೆ. ಆದರೆ ರಾಜ್ಯದ ಜನ ಅವರ ಸಾಧನೆ, ಅಭಿವೃದ್ಧಿ ಕಾರ್ಯಕ್ರಮಗಳ ಲೆಕ್ಕ ಹೇಳುತ್ತಾರೆ ಎಂದು ಕಾಯುತ್ತಿದ್ದಾರೆ ಎಂದರು.
ಮೋದಿ ಅವರು ಕೋವಿಡ್ ಸಂದರ್ಭದಲ್ಲಿ 20 ಲಕ್ಷ ಕೋಟಿ ಪ್ಯಾಕೆಜ್ ಘೋಷಣೆ ಮಾಡಿದ್ದು ಯಾವ ವರ್ಗದವರಿಗೆ ಎಷ್ಟು ಪರಿಹಾರ ನೀಡಲಾಗಿದೆ, ಕೋವಿಡ್ ಮೃತರಿಗೆ, ಆಕ್ಸಿಜನ್ ದುರಂತದಲ್ಲಿ ಸತ್ತವರಿಗೆ ಎಷ್ಟು ಪರಿಹಾರ ನೀಡಿದ್ದಾರೆ ಎಂಬ ಲೆಕ್ಕ ನೀಡಲೇ ಇಲ್ಲ. ಈ ವಿಚಾರವಾಗಿ ಮಾತನಾಡಿದ್ದಾರೆ ಅವರಿಗೆ ಗೌರವ ಇರುತ್ತಿತ್ತು ಎಂದ ಡಿಕೆಶಿ, ಮೋದಿ ಅವರು ನನಗೆ ಮತ ಹಾಕಿ ಎಂದು ಕೇಳುತ್ತಿದ್ದಾರೆ. ಅವರಿಗೂ ರಾಜ್ಯ ಚುನಾವಣೆಗೆ ಏನು ಸಂಬಂಧ? ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಅವರ ಮುಖ ನೋಡಿ ಮತ ನೀಡಬೇಕು ಎಙದರು.
ಬೊಮ್ಮಾಯಿ, ಯಡಿಯೂರಪ್ಪ, ಅವರ ಮಂತ್ರಿಗಳ ಸಾಧನೆ ಬಗ್ಗೆ ಮಾತನಾಡುತ್ತಿಲ್ಲ. ದಕ್ಷ ಆಡಳಿತಕ್ಕೆ ಹೆಸರಾಗಿರುವ ಕರ್ನಾಟಕ ರಾಜ್ಯದಲ್ಲಿ ಇವರು ತಮ್ಮ ಆಡಳಿತ ಹೇಗಿತ್ತು ಎಂಬುದನ್ನು ಹೇಳುತ್ತಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ, ಆದರೆ ರಾಜ್ಯದಲ್ಲಿ ನಾಯಕತ್ವವನ್ನು ಬಿಂಬಿಸಬೇಕಲ್ಲವೆ. ಬಿಜೆಪಿ ಇಂತಹ ದುಸ್ಥಿತಿಗೆ ಬಂದಿದೆ ಎಂಬುದಕ್ಕೆ ಸಾಕ್ಷಿ ಎಂದ ಅವರು, ಪ್ರಧಾನಿ, ನಡ್ಡಾ ಸೇರಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. 200 ಯೂನಿಟ್ ವಿದ್ಯುತ್ ಉಚಿತ, 2 ಸಾವಿರ ಖಚಿತ, 10 ಕೆ.ಜಿ ಅಕ್ಕಿ ನಿಶ್ಚಿತ, ಎಲ್ಲಾ ಮಹಿಳೆಯರಿಗೆ ಸಾರ್ವಜನಿಕ ಬಸ್ ಪ್ರಯಾಣ ಉಚಿತ, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ. ಈ ಐದು ಯೋಜನೆಗಳನ್ನು ಸರ್ಕಾರ ಬಂದ ಮೊದಲ ಸಂಪುಟದಲ್ಲಿ ಜಾರಿ ಮಾಡಿ ಜೂನ್ ತಿಂಗಳಿಂದ ಜಾರಿ ಮಾಡುತ್ತೇವೆ. ಮುಂದಿನ ಎರಡು ದಿನಗಳಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಎಲ್ಲಾ ವರ್ಗಗಳಿಗೆ ಆದ್ಯತೆ ನೀಡಲಾಗಿದೆ. ಹಳೆ ಪಿಂಚಣಿ ಬಗ್ಗೆ ಆಲೋಚನೆ ಮಾಡಿದ್ದು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ, ಮಲೆನಾಡು ಪ್ರದೇಶ, ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ನೀಡಲಾಗುವುದು ಎಂದರು.