ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಇದೀಗ ರೋಚಕ ಘಟ್ಟ ಸಮೀಪಿಸುತ್ತಿದೆ. ನಾಮಪತ್ರ ಸಲ್ಲಿಕೆ, ಹಿಂತೆಗೆತ ಸಹಿತ ಪ್ರಮುಖ ಹಂತಗಳನ್ನು ಕ್ರಮಿಸುತ್ತಿರುವಂತೆಯೇ ಪ್ರಚಾರ ವೈಖರಿಯೂ ತಾರಕ್ಕೇರಿದೆ.
ಆಡಳಿತಾರೂಢ ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಯೋಗಿ ಆದಿತ್ಯನಾಥ್ ಸಹಿತ ಘಟಾನುಘಟಿ ನಾಯಕರು ಪ್ರಚಾರದ ಅಖಾಡದಲ್ಲಿದ್ದಾರೆ. ಕಾಂಗ್ರೆಸ್ ಪರವಾಗಿ ಎಐಸಿಸಿ ನಾಯಕರಾದ ರಾಹುಲ್ ಗಾಙಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಹಿತ ಅನೇಕ ದಿಗ್ಗಜರು ಮತಬೇಟೆಯಲ್ಲಿ ತೊಡಗಿದ್ದಾರೆ. ಜೆಡಿಎಸ್ ಹುರಿಯಾಳುಗಳ ಪರವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಸಹಿತ ರಾಜ್ಯದ ನಾಯಕರು ಪ್ರಚಾರಕ್ಕೆ ರಂಗು ತುಂಬಿದ್ದಾರೆ.
ರಾಜಕೀಯ ಪ್ರತಿಷ್ಠೆಯ ಅಖಾಡದಲ್ಲಿ ಈ ಎಲ್ಲಾ ಪಕ್ಷಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿರುವಾಗಲೇ ಸಮೀಕ್ಷಾ ಫಲಿತಾಂಶಗಳೂ ಕುತೂಹಲಕಾರಿ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿವೆ. ಈ ನಡುವೆ, ಎಬಿಪಿ-ಸಿವೋಟರ್ ಸಮೀಕ್ಷೆ ಈ ಲೆಕ್ಕಾಚಾರಗಳಿಗೆ ರೋಚಜತೆ ತುಂಬಿದೆ. ಸಿ-ವೋಟರ್ ಮತ್ತು ಎಬಿಪಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಗುವ ಸಾಧ್ಯತೆಗಳು ಗೋಚರಿಸಿವೆ.
ಸಮೀಕ್ಷಾ ಫಲಿತಾಂಶ:
-
ಕಾಂಗ್ರೆಸ್ : 107ರಿಂದ 119
-
ಬಿಜೆಪಿ : 74 ರಿಂದ 86
-
ಜೆಡಿಎಸ್ : 23 ರಿಂದ 35
-
ಇತರರು : ಗರಿಷ್ಟ 5
ರಾಜ್ಯದ 224 ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆದಿದ್ದು 17,772 ಅಭಿಪ್ರಾಯಗಳನ್ನಾಧರಿಸಿ ಈ ಚುನಾವಣಾ ಪೂರ್ವ ಸಮೀಕ್ಷೆ ನಡೆಸಲಾಗಿದೆ. ಅದರಂತೆ ಕಾಂಗ್ರೆಸ್ ಪಕ್ಷವು 107ರಿಂದ 119 ಸ್ಥಾನಗಳನ್ನು ಗೆಲ್ಲಲು ಪರಿಸ್ಥಿತಿ ಪೂರಕವಾಗಿದ್ದರೆ, ಬಿಜೆಪಿಗೆ 74 ರಿಂದ 86 ಗೆಲ್ಲಲು ಅನುಕೂಲಕರ ಸ್ಥಿತಿ ಇದೆ. ಜೆಡಿಎಸ್ 23 ರಿಂದ 35 ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಇತರರೂ 5 ಕ್ಷೇತ್ರಗಳಲ್ಲಿ ಪ್ರಭಾವ ತೋರುತ್ತಿರುವುದು ಗೊತ್ತಾಗುತ್ತಿದೆ.