ಬೆಂಗಳೂರು: ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯಿಂದ ೨೦೨೩ರ ವಿಧಾನಸಭಾ ಚುನಾವಣೆಗೆ ಪೂರಕವಾಗಿ ಸ್ಲಂ ಜನರ ಪ್ರಣಾಳಿಕೆಯ ಪೋಸ್ಟರ್ ಅನ್ನು ಪತ್ರಿಕಾ ಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು.
ಇಂದು ರಾಜಕೀಯ ಪಕ್ಷಗಳು ಸ್ಲಂಗಳಿಗೆ ರ‍್ಯಾಲಿ ಮಾಡಲು ಜನರನ್ನು ಕರೆದೊಯ್ಯುತ್ತಿದೆ, ಚುನಾವಣಾ ವ್ಯವಸ್ಥೆಯನ್ನು ಆಸೆ ಆಮಿಷಗಳಿಂದ ಸೆಳೆದು ಬಿಜೆಪಿಯ ಜನಸಂಕಲ್ಪ ಯಾತ್ರೆ, ಕಾಂಗ್ರೇಸ್‌ನ ಪ್ರಜಾಧನಿ ಯಾತ್ರೆ ಜೆಡಿಎಸ್‌ನ ಪಂಚರತ್ನ ಯಾತ್ರೆ ಸ್ಲಂ ಜನರ ಮತ್ತು ಬಡವರ ಸಮಸ್ಯೆಗಳನ್ನು ಚರ್ಚೆ ಮಾಡದೇ ಹಣ, ಬಾಡೂಟ, ದೇವರ ಮೇಲೆ ಪ್ರಮಾಣ, ಕಿಟ್‌ಗಳ ಹಂಚಿಕೆ ರಾಷ್ಟ್ರೀಯ ನಾಯಕರಿಗೆ ಜನ ತೋರಿಸಲು ಸ್ಲಂ ಜನರನ್ನು ದಿನ ಗೂಲಿ ಲೆಕ್ಕದಲ್ಲಿ ಸೇರಿಸುತ್ತಿರುವುದು ಪ್ರಜಾತಂತ್ರಕ್ಕೆ ಬಗೆದ ಅಪಮಾನವಾಗಿದೆ. ಹಾಗಾಗಿ ಸ್ಲಂ ಜನರನ್ನು ರಾಜಕೀಯವಾಗಿ ಜಾಗೃತಿಗೊಳಿಸಲು ಸ್ಲಂ ಜನಾಂದೋಲನ ಕರ್ನಾಟಕ ಕೊಳಗೇರಿ ಜನರ ಜಲ್ವಂತ ಸಮಸ್ಯೆಗಳ ಮೇಲೆ ಪ್ರಣಾಳಿಕೆಯನ್ನು ಹೊರತಂದಿದ್ದು ಈ ಅಂಶಗಳನ್ನು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ ಸ್ಲಂ ನಿವಾಸಿಗಳು ಅಭಿಯಾನ ಆರಂಭಿಸಲಾಗಿದೆ ಎಂಬುದು ಪ್ರಮುಖತ ಅಭಿಪ್ರಾಯ.
ಚುನಾವಣೆಯಲ್ಲಿ ಮತ ಕೇಳಲು ಬರುವ ಅಭ್ಯರ್ಥಿಗಳನ್ನು ನಮಗೆ ಘನತೆಯ ವಸತಿ, ನಗರ ಉದ್ಯೋಗ ಖಾತ್ರಿ, ಮತ್ತು ಬಡತನ ಮುಕ್ತಕ್ಕಾಗಿ ನಿಮ್ಮ ಪಕ್ಷದ ನಿಲುವೇನು? ಎನ್ನುವುದನ್ನು ಪ್ರಶ್ನಿಸಿ ಮತ ಚಲಾಯಿಸಬೇಕು, ಮತವೇ ನಮ್ಮ ವಿಮೋಚನೆಯ ಅಸ್ತ್ರವಾಗಿದೆ ಎಂದು ಸ್ಲಂ ಜನರ ಪ್ರಣಾಳಿಕೆ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಹೇಳಿದರು.
ರಾಜ್ಯದ ೧೮ ಜಿಲ್ಲೆಗಳ ೧ ಸಾವಿರಕ್ಕೂ ಮೇಲ್ಪಟ್ಟ ಕೊಳಚೆ ಪ್ರದೇಶಗಳಲ್ಲಿ ೧೨ ಸ್ಲಂ ಜನರ ಪ್ರಣಾಳಿಕೆ ಮೇಲೆ ರಾಜಕೀತ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಈಗಾಗಲೇ ಕಾಂಗ್ರೇಸ್, ಜೆಡಿಎಸ್ ಮತ್ತು ಆಮ್‌ಆದ್ಮಿ ಪಕ್ಷಗಳ ಪ್ರಣಾಳಿಕಾ ಸಮಿತಿಗೆ ನಮ್ಮ ಜನರ ಆಗ್ರಹಗಳನ್ನು ನೀಡಿ ಸಮಾಲೋಚನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಈ ಅಂಶಗಳ ಮೇಲೆ ಜಾಗೃತಿ ಅಭಿಯಾನ ಕೈಗೊಳ್ಳುತ್ತಿದ್ದು ಸ್ಲಂ ಜನರು ವಸತಿ, ಉದ್ಯೋಗ ಖಾತ್ರಿ, ಬಡತನ ಮುಕ್ತಗೊಳಸುವ ನಿಟ್ಟಿನಲ್ಲಿ ಮತ ಚಲಾಯಿಸಬೇಕೆಂದರು.
ರಾಜ್ಯದ ಸ್ಲಂ ನಿವಾಸಿಗಳು ರಾಜಕೀಯ ಪಕ್ಷಗಳಿಂದ ನಿರೀಕ್ಷಿಸುವ ಪ್ರಣಾಳಿಕೆಯ ಅಂಶಗಳು:
-
ಕೊಳಗೇರಿಗಳ ಮತ್ತು ಸ್ಲಂ ನಿವಾಸಿಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯವನ್ನು ಘೋಷಿಸಬೇಕು.
-
ಸ್ಲಂ ಜನರ ಅಭಿವೃದ್ದಿ ನಿಗಮ ಸ್ಥಾಪನೆಯಾಗಬೇಕು.
-
ಸ್ಲಂ ನಿವಾಸಿಗಳಿಗೆ ನಗರ ಉದ್ಯೋಗ ಖಾತ್ರಿ ಜಾರಿ ಮಾಡಬೇಕು.
-
ರಾಜ್ಯದಲ್ಲಿ ವಸತಿ ಹಕ್ಕು ಕಾಯಿದೆ ಜಾರಿಯಾಗಬೇಕು.
-
ರಾಜ್ಯದ ೩.೩೬ ಲಕ್ಷ ಸ್ಲಂ ಕುಟುಂಬಗಳಿಗೆ ಹಕ್ಕುಪತ್ರವನ್ನು ಕ್ರಯ ಮಾಡುವ ಮೂಲಕ ಭೂ ಮಾಲೀಕತ್ವ ನೀಡಬೇಕು.
-
ಸ್ಲಂ ಜನರಿಗೆ ಉಚಿತವಾಗಿ ಮನೆ ನಿರ್ಮಾಣ, ಸಬ್ಸಿಡಿ ಹೆಚ್ಚಳ ಮತ್ತು ಜನರೇ ನಿರ್ಮಿಸಿಕೊಳ್ಳುವ ಯೋಜನೆಗಳು ಜಾರಿಯಾಗಬೇಕು.
-
ರಾಜ್ಯದಲ್ಲಿರುವ ಖಾಸಗಿ ಮಾಲೀಕತ್ವ ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ ನೀಡಬೇಕು.
-
ನಗರ ಲ್ಯಾಂಡ್ ಬ್ಯಾಂಕ್ ನೀತಿ ಜಾರಿಯಾಗಬೇಕು ಮತ್ತು ನೆಲಬಾಡಿಗೆ ಸ್ಲಂಗಳಿಗೆ ನೀತಿ ರೂಪಿಸಬೇಕು.
-
ರಾಜ್ಯದಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಬಲಗೊಳಿಸಬೇಕು.
-
ಸರ್ಕಾರಿ ಶಾಲೆಗಳ ಸಬಲೀಕರಣವಾಗಬೇಕು ಮತ್ತು ಜಿಲ್ಲಾಸ್ಪತ್ರೆಗಳ ಖಾಸಗೀಕರಣ ನಿಲ್ಲಬೇಕು.
-
ಕರ್ನಾಟಕ ಸಮಗ್ರ ಸ್ಲಂ ಅಭಿವೃದ್ಧಿ ಕಾಯಿದೆ ೨೦೧೮ರ ಕರಡನ್ನು ಜಾರಿ ಮಾಡಬೇಕು.
-
ನಗರ ಬಡತನದ ಪ್ರಮಾಣವನ್ನು ಇಳಿಕೆ ಮಾಡಬೇಕು.
ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾವಿತ್ರಿಬಾಯಿಪುಲೆ ಮಹಿಳಾ ಸಂಘಟನೆಯ ಪದಾಧಿಕಾರಿಗಳಾದ ರಸೂಲ್ ನದಾಫ್, ವೆಂಕಮ್ಮ, ಅಲ್ಲಮ್ಮಪ್ರಭು, ರೇಣುಕ ಎಲ್ಲಮ್ಮ, ಮಂಜಣ್ಣ, ಅರುಣಾ, ಶೇಖರ್ ಬಾಬು, ತಿರುಮಲಯ್ಯ, ಕೆಂಪರಾಜು, ರಾಮಕೃಷ್ಣಯ್ಯ, ಮಂಜುಬಾಯಿ ಮತ್ತು ತೇಜಸ್ ಕುಮಾರ್ ಉಪಸ್ಥಿತರಿದ್ದರು.

























































