ಬಂಟ್ವಾಳ : ಕರಾವಳಿಯ ತಿರುಮಲದಲ್ಲಿ ಅದ್ಧೂರಿ ವೈಭವ.. ಭಕ್ತ ಸಾಗರದ ನಡುವೆ ವೆಂಕಟೇಶ್ವರನ ರಾಜ್ಯಭಾರ.. ಇಂತಹಾ ಅನನ್ಯ ಸನ್ನಿವೇಶಕ್ಕೆ ಬಂಟ್ವಾಳ ಸಾಕ್ಷಿಯಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿಧ್ಧ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಈ ವೈಭವೋಪೇತ ಮಹೋತ್ಸವವನ್ನು ನಾಡಿನ ವಿವಿದೆಡೆಯಿಂದ ಆಗಮಿಸಿದ್ದ ಭಕ್ತರು ಕಣ್ತುಂಬಿಕೊಂಡರು.
ವಾರಾಂತ್ಯದ ಬಾನುವಾರ ಬಂಟ್ವಾಳದ ಆಸ್ತಿಕ ಸಮುದಾಯದ ಪಾಲಿಗೆ ಅವಿಸ್ಮರಣೀಯ ಕ್ಷಣವಾಯಿತು. ಕರಾವಳಿಯ ಭಗವತ್ ಭಕ್ತರ ಪಾಲಿಗೆ ದಕ್ಷಿಣದ ತಿರುಪತಿಯಂತಿರುವ ಬಂಟ್ವಾಳದ ತಿರುಮಲ ಶ್ರೀ ವೆಂಕಟೇಶ್ವರನ ಮಹಾಜಾತ್ರೆಯ ಸೊಬಗು, ಸೊಗಸು ಅನನ್ಯ ದೃಶ್ಯಧಾರೆಗೆ ಸಾಕ್ಷಿಯಾಯಿತು.
ನೆರೆದ ಜನಸಾಗರದ ನಡುವೆ ಕಂಗೊಳಿಸುತ್ತಿದ್ದ ಬ್ರಹ್ಮರಥದಲ್ಲಿ ವಿರಾಜಮಾನನಾಗಿದ್ದ ಭಗವಂತನನನ್ನು ಕಾಣಲು ಭಕ್ತರು ನಾ ಮುಂದು ತಾ ಮುಂದು ಎಂದು ಮುಗಿಬಿದ್ದರು. ಸಾವಿರಾರು ಭಕ್ತರು ನೆರೆದಿದ್ದರೂ ಅಚ್ಚುಕಟ್ಟಾದ ವ್ಯವಸ್ಥೆಯ ಕೈಂಕರ್ಯ ಮಹೋತ್ಸವಕ್ಕೆ ಆಗಮಿಸಿದ ಭಕ್ತ ಸಮೂಹದ ಮೆಚ್ಚುಗೆಗೂ ಪಾತ್ರವಾಯಿತು.