ಕೋಲಾರ: ಮಾಲೂರಿನಲ್ಲಿ ವಾರಾಂತ್ಯ ದಿನವಾದ ಶನಿವಾರ ನಡೆದ ‘ಪ್ರಜಾಧ್ವನಿ’ ಯಾತ್ರೆಯು ‘ಕೈ’ ಬೆಂಬಲಿಗರ ಜಾತ್ರೆಯಾಗಿ ಪರಿಣಮಿಸಿತು. ಜನಸಾಗರದ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಹೆಲಿಕಾಫ್ಟರ್ ಮೂಲಕ ಪುಷ್ಪವೃಷ್ಠಿ ಮಾಡಿದ ಅನನ್ಯ ಸನ್ನಿವೇಶ ಗಮನಸೆಳೆಯಿತು.
ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದ ನಾಯಕರು ಭರ್ಜರಿ ಸವಾರಿ ಕೈಗೊಂಡಿದ್ದಾರೆ. ವಿವಿಧ ಯಾತ್ರೆಗಳ ಮೂಲಕ ರಾಜ್ಯಾದ್ಯಂತ ಪರ್ಯಟನೆ ಕೈಗೊಂಡಿರುವ ಕಾಂಗ್ರೆಸ್ ನಾಯಕರ ಯಾತ್ರೆಗಳ ಪೈಕಿ ‘ಪ್ರಜಾಧ್ವನಿ’ ಬಗ್ಗೆ ಕಾರ್ಯಕರ್ತರ ಕುತೂಹಲ ಹೆಚ್ಚಾಗಿದೆ. ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಜನಾಸಾಗರ ಜಮಾಯಿಸುವಂತೆ ಮಾಡಿರುವ ‘ಪ್ರಜಾಧ್ವನಿ’ ಯಾತ್ರೆ ಕೋಲಾರ ಜಿಲ್ಲೆ ಮಾಲೂರಿನಲ್ಲಿಂದು ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಿತ ಪ್ರಮುಖ ನಾಯಕರು ರೋಡ್ ಶೋ ಕೈಗೊಂಡರು. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಈ ನಾಯಕರು ಕಮಾಲ್ ಪ್ರದರ್ಶಿಸಿದರು. ನಾಯಕ ಈ ರೋಡ್ ಶೋ ನೋಡಲು ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.
Kolar : ಮಾಲೂರಿನಲ್ಲಿ @DKShivakumar ಅವರಿಗೆ @INCKarnataka ಕಾರ್ಯಕರ್ತರಿಂದ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿ. @LavanyaBallal @Bhavyanmurthy @drnagalakshmi_c pic.twitter.com/p5kWUrn0cs
— jayaa (@unsocial2023) February 4, 2023
ಈ ನಡುವೆ, ಜನಸಾಗರದ ನಡುವೆ, ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಆಗಸದೆತ್ತರದಿಂದ ಪುಷ್ಪವೃಷ್ಟಿ ನಡೆಸಿದರು. ಹೆಲಿಕಾಪ್ಟರ್ ಮೂಲಕ ಪುಷ್ಫವೃಷ್ಠಿಯಾಗುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಜೈಕಾರ ಹಾಕಿದರು.
ಮಾಲೂರಿನಲ್ಲಿ ನಡೆದ ಈ ‘ಪ್ರಜಾಧ್ವನಿ’ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಸಚಿವರಾದ ಕೆ ಎಚ್ ಮುನಿಯಪ್ಪ, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಡಾ.ಎಚ್.ಸಿ.ಮಹದೇವಪ್ಪ, ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್, ವಿಧಾನ ಪರಿಷತ್ ಮಾಜಿ ಸಭಾಪತಿ ಡಾವಿ.ಆರ್.ಸುದರ್ಶನ್, ಶಾಸಕರಾದ ಕೆ ವೈ ನಂಜೇಗೌಡ, ಶರತ್ ಬಚ್ಚೇಗೌಡ, ಎಂಎಲ್ಸಿ ಎಸ್ ರವಿ, ನಸೀರ್ ಅಹಮದ್, ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್ ಸೀತಾರಾಂ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್, ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್, ರತ್ನಮ್ಮ ನಂಜೇಗೌಡ ಮೊದಲಾದವರು ಭಾಗವಹಿಸಿದ್ದರು.