ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೆಮ್ಮಿಗೆಪುರ ವಾರ್ಡ್ ನ ಬನಶಂಕರಿ 6ನೇ ಹಂತ ಜಟ್ಟಿಗರಹಳ್ಳಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ “ಸರ್ವರಿಗೂ ಸೂರು” ಮನೆಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಸಚಿವ ಸೋಮಶೇಖರ್, ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸೂರು ಕಲ್ಪಿಸುವ ಯೋಜನೆ ಇದಾಗಿದೆ. ಅರ್ಹ ಫಲಾನುಭವಿಗಳಿಗೆ ಮನೆಗಳ ಹಂಚಿಕೆಯಾಗಬೇಕು. ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸರ್ವರಿಗೂ ಸೂರು ಒದಗಿಸುವುದು ಸರ್ಕಾರದ ಕನಸಾಗಿದೆ. ಇದು ಸಾಕಾರಗೊಳ್ಳಲು ಜನರ ಸಹಕಾರ ಕೂಡ ಅಗತ್ಯವಿದೆ ಎಂದು ಹೇಳಿದರು.
ಮನೆ ಗೋಡೆಗಳ ಮೇಲೆ ಬಿಜೆಪಿ ಬರಹ:
ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಅಭಿಯಾನದಡಿ ಹೆಮ್ಮಿಗೆಪುರ ವಾರ್ಡ್ ನ
ಜಟ್ಟಿಗರಹಳ್ಳಿಯಲ್ಲಿ ಮನೆ ಮನೆಗೆ ತೆರಳಿದ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳ ಕುರಿತ ಕರಪತ್ರ ಹಂಚಿ, ಮನೆಗಳ ಗೋಡೆಗಳ ಮೇಲೆ ‘ಬಿಜೆಪಿಯೇ ಭರವಸೆ, ನಿಮ್ಮ ಮತ ಬಿಜೆಪಿಗೆ’ ಎಂಬ ಗೋಡೆಬರಹ ಬರೆಯುವ ಕಾರ್ಯ ನಡೆಸಿದರು.