ಬೆಂಗಳೂರು: ರಾಜಧಾನಿ ಬೆಂಗಳೂರು ಇಂದು ಕಾಂಗ್ರೆಸ್ ವನಿತೆಯರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ರಾಜ್ಯ ರಾಜಕಾರಣದಲ್ಲಿ ಅಪರೂಪ ಎಂಬಂತೆ ಬೆಂಗಳೂರಿನಲ್ಲಿ ಮಹಿಳಾ ಮಣಿಗಳದ್ದೇ ಸಮಾವೇಶ ಗಮನಸೆಳೆಯಿತು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಈ ಸಮಾವೇಶದಲ್ಲಿ ಎಲ್ಲರ ಕುತೂಹಲದ ಕೇಂದ್ರ ಬಿಂದುವಾದರು.
ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕ ಗಾಂಧಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಅವರ ಮಾತಿನ ಮೋಡಿಗೆ ಜನಸ್ತೋಮ ಜೈಕಾರ ಹಾಕಿತು.
ನಿಮ್ಮ ದೊಡ್ಡ ಶಕ್ತಿ ರಾಜಕೀಯ. ರಾಜಕೀಯ ಪಕ್ಷಗಳು ಒಂದು ವರ್ಗದ ಓಲೈಕೆಗೆ ಮುಂದಾಗುತ್ತಾರೆ. ಆದರೆ ಮಹಿಳೆಯರ ಬಗ್ಗೆ ವಿಚಾರ ಮಾಡುವುದಿಲ್ಲ. ನೀವು ಎಲ್ಲ ರಾಜಕೀಯ ಪಕ್ಷಗಳು ನಿಮ್ಮ ಹಕ್ಕು ಸಮಾನತೆಗೆ ಆದ್ಯತೆ ನೀಡುವಂತೆ ಮಾಡಬೇಕು. ನಾನು ಬಿಜೆಪಿಯನ್ನು ಟೀಕಿಸುವುದಿಲ್ಲ. ನಾನು ಇಲ್ಲಿರುವ ಮಹಿಳೆಯರಿಗೆ ಒಂದು ಪ್ರಸ್ನೆ ಕೇಳುತ್ತೇನೆ. ಬಿಜೆಪಿ ಬಹಳ ದಿನಗಳಿಂದ ಬಿಜೆಪಿ ಅಧಿಕಾರದಲ್ಲಿದೆ ನಿಮ್ಮ ಜೀವನದಲ್ಲಿ ಸುಧಾರಣೆ ಕಂಡಿದ್ದೀರಾ? ಬೆಲೆಗಳು ಇಳಿಕೆಯಾಗಿವೆಯೇ? ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ವಿಚಾರಗಳಿವೆಯೇ? ನೀವು ಸಂತೋಷವಾಗಿದ್ದೀರಾ? ಇದು ಬಹಳ ಸರಳವಾದ ಪ್ರಶ್ನೆ. ಮುಂದಿನ ಕೆಲ ದಿನಗಳಲ್ಲಿ ಚುನಾವಣೆ ಬರುತ್ತಿವೆ. ನೀವು ಕಳೆದ ಕೆಲ ವರ್ಷಗಳ ಆಡಳಿತವನ್ನು ನೋಡಿ, ಯಾರು ಉತ್ತಮರು ಎಂದು ನೀವೆ ತುಲನೆ ಮಾಡಿ, ಯಾರು ನಿಮಗೆ ಅಗತ್ಯವಿರುವ ನೆರವು ನೀಡಿದ್ದಾರೆ ಎಂದು ತೀರ್ಮಾನಿಸಿ. ಕರ್ನಾಟಕದಲ್ಲಿ ಮಹಿಳೆಯರ ಪರಿಸ್ಥಿತಿ ನೀಜಕ್ಕೂ ನಾಚಿಕೆಗೇಡಿನ ವಿಚಾರವಿದೆ. ನಿಮ್ಮ ಸಚಿವರು ಉದ್ಯೋಗ ನೀಡಲು 40% ಲಂಚ ಪಡೆಯುತ್ತಿದ್ದಾರೆ ಎಂದು ಕೇಳಿದೆ. 1.50 ಲಕ್ಷ ಕೋಟಿ ನಿಮ್ಮ ಹಣವನ್ನು ಭ್ರಷ್ಟಾಚಾರದ ಮೂಲಕ ಲೂಟಿ ಮಾಡಿದ್ದಾರೆ ಎಂದರು.
ಬೆಂಗಳೂರಿನಲ್ಲಿ 8 ಸಾವಿರ ಕೋಟಿ ಬಜೆಟ್ ಇದ್ದರೆ ಅದರಲ್ಲಿ 3200 ಕೋಟಿ ಇವರ ಜೇಬಿಗೆ ಹೋಗುತ್ತದೆ. ಪಿಎಸ್ಐ ಹಗರಣದಂತೆ ಹಲವು ನೇಮಕಾತಿ ಅಕ್ರಮಗಳಿವೆ. ಪಿಎಸ್ಐ ಹುದ್ದೆ ಮಾರಿಕೊಂಡಿದ್ದಾರೆ. ನೀವು ನಿಮ್ಮ ಮಕ್ಕಳು ಉತ್ತಮ ಕೆಲಸ ಪಡೆಯಲಿ ಎಂದು ಶಿಕ್ಷಣೆ ಕೊಟ್ಟು ಬೆಳೆಸುತ್ತೀರಾ? ಈ ರೀತಿ ಹಗರಣವಾದರೆ, ನೀವು ಪ್ರತಿಯೊಂದಕ್ಕೂ ಲಂಚ ಕೊಡಬೇಕಾಗಿದೆ. ಚಾಲಕರ ಪರವಾನಿಗೆ, ಪಡಿತರ ಪಡೆಯಲು ಲಂಚ ನೀಡಬೇಕು. ಕೋವಿಡ್ ಸಮಯದಲ್ಲಿ ಸರ್ಕಾರ ಮಹಿಳೆಯರಿಗೆ ಯಾವುದೇ ರೀತಿಯ ನೆರವು ನೀಡಲಿಲ್ಲ. ಗಾರ್ಮೆಂಟ್ಸ್ ಕಾರ್ಮಿಕರಿಗೆ ಸರ್ಕಾರ ನೆರವು ನೀಡಲಿಲ್ಲ. ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿವೆ. ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ರಾಜ್ಯದ 2.50 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ತುಂಬಿಲ್ಲ. ಮಹಿಳೆಯರ ಮೇಲಿನ ಅಪರಾಧ ಹೆಚ್ಚಳವಾಗಿದ್ದು, ಪ್ರತಿನಿತ್ಯ ಮಹಿಳೆಯರ ಮೇಲೆ 46 ಅಪರಾಧ ನಡೆಯುತ್ತಿವೆ ಎಂದು ಬೊಟ್ಟು ಮಾಡಿದರು.
ನೀವು ಕಾಂಗ್ರೆಸ್ ಅವಧಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಎಷ್ಟಕ್ಕೆ ಪಡೆಯುತ್ತಿದ್ದಿರಿ, ಈಗ ಅದು ಎಷ್ಟಾಗಿದೆ ಎಂದು ನಿಮಗೆ ಗೊತ್ತಿದೆ. ಜೀವನಸಾಗಿಸುವುದು ದುಬಾರಿಯಾಗಿದ್ದು, ಕಷ್ಟವಾಗಿದೆ. ಮಕ್ಕಳ ಶುಲ್ಕವಾಗಲಿ, ಮದುವೆ ಸಮಾರಂಭವಾಗಲಿ ಎಲ್ಲವೂ ಆರ್ಥಿಕ ಹೊರೆಯಾಗಿವೆ. ಆದರೂ ಸರ್ಕಾರದ ಹೊಣೆಗಾರಿಕೆಯನ್ನು ಪ್ರಶ್ನೆ ಮಾಡುತ್ತಿಲ್ಲ. ಹೀಗಾಗಿ ಸರ್ಕಾರ ಪಠ್ಯ ಪರಿಷ್ಕರಣೆ ಹೆಸರಲ್ಲಿ ಮಹನೀಯರ ವಿಚಾರವನ್ನು ತೆಗೆಯುವ ಮೂಲಕ ಗಮನ ಬೇರೆಡೆ ಸೆಳೆಯುತ್ತಿದ್ದಾರೆ. ಇಡೀ ಆಡಳಿಯ ಯಂತ್ರ ಕೆಲವು ಬಂಡವಾಳ ಶಾಹಿಗಳ ಹಿತ ಕಾಯಲು ಇದೆ. ಕೆಲವರು ಮಾತ್ರ ಶ್ರೀಮಂತರಾಗುತ್ತಿದ್ದರೆ, ಉಳಿದ ಭಾರತ ದಿನನಿತ್ಯ ಬಡವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಕರಣ ಮಾಡುತ್ತಿದ್ದಾರೆ. ಕೃಷಿಗೆ ಆರ್ಥಿಕ ನೆರವು ನೀಡದೇ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಸರ್ಕಾರದ ಜಿಎಸ್ ಟಿ, ನೋಟು ರದ್ಧತಿಗಳಿಂದ ಕೆಟ್ಟ ನಿರ್ಧಾರಗಳಿಂದ ನರಳುವಂತಾಗಿವೆ. ಕಾಂಗ್ರೆಸ್ ಸರ್ಕಾರ ಭೂ ಸುಧಾರಣಾ ಕಾಯ್ದೆಯಂತಹ ಕಾರ್ಯಕ್ರಮಗಳನ್ನು ನೀಡಿತ್ತು. ರೈತರ 8 ಸಾವಿರ ಕೋಟಿ ಸಾಲ ಮನ್ನಾ, ಬೆಂಗಳೂರಿನಲ್ಲಿ ಐಟಿ ಕ್ಷೇತ್ರಗಳ ಅಭಿವೃದ್ಧಿ ಮಾಡಲಾಗಿದೆ. ಅನ್ನಭಾಗ್ಯದ ಮೂಲಕ 3.80 ಲಕ್ಷ ಜನರಿಗೆ ಅಕ್ಕಿ, ಬೇಳೆಯಂತಹ ದಿನಸಿ ನೀಡಿದೆ. ಇಂದಿರಾ ಕ್ಯಾಂಟೀನ್, ಕ್ಷೀರ ಭಾಗ್ಯ, ಮಾತೃಪೂರ್ಣದಂತಹ ಕಾರ್ಯಕ್ರಮಗಳನ್ನು ನಿಮಗಾಗಿ ಕಾಂಗ್ರೆಸ್ ಸರ್ಕಾರ ನೀಡಿತ್ತು. ಹೀಗೆ ಸ್ವಸಹಾಯಕ ಯೋಜನೆ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳಂದತಹ ಕಾರ್ಯಕ್ರಮ ನೀಡಿದೆ ಎಂದರು.


























































