ಮೈಸೂರು: ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ “ಬೂತ್ ವಿಜಯ ಅಭಿಯಾನ”ಕ್ಕೆ ಚಾಲನೆ ನೀಡಿದರು.
ನರಸಿಂಹರಾಜ ಕ್ಷೇತ್ರದ ವಾರ್ಡ್ ನಂಬರ್ 30 ರಿಂದ ವಿಜಯ ಸಂಕಲ್ಪ ಆರಂಭವಾಗಿದೆ. ಈ ಬಾರಿ ಈ ಕ್ಷೇತ್ರದಿಂದ ನೂರಕ್ಕೆ ನೂರರಷ್ಟು ಬಿಜೆಪಿ ಶಾಸಕರು ಆಯ್ಕೆಯಾಗಲಿದ್ದಾರೆ. ಶಾಸಕರ ಆಯ್ಕೆ ಹಿಂದೆ ಕಾರ್ಯಕರ್ತರ ಶ್ರಮ ಅಡಗಿದೆ ಎಂದು ಹೇಳಿದರು.
ಐದು ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯದ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸಬೇಕು. ಬೂತ್ ಮಟ್ಟದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
“ಸಿದ್ದರಾಮಯ್ಯರಿಗೆ ಶೋಭೆಯಲ್ಲ”
ಮೈಸೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಬಗ್ಗೆ ನೀಡಿರುವ ಹೇಳಿಕೆ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ಮುಖ್ಯಮಂತ್ರಿ ಸ್ಥಾನ ಉನ್ನತ ಹುದ್ದೆ. ಸಿದ್ದರಾಮಯ್ಯ ಅವರೂ ಮುಖ್ಯಮಂತ್ರಿ ಆಗಿದ್ದವರು, ಐದು ವರ್ಷ ಆಡಳಿತ ಮಾಡಿದ್ದವರು. ಕೋವಿಡ್ ಬಂದ ಮೇಲೆ ಏನೇನೋ ಮಾತನಾಡೋದಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಸಿದ್ದರಾಮಯ್ಯ ಅವರಿಗೆ ನಾನು ಒಂದು ಕೇಳುತ್ತೇನೆ. ರಾಹುಲ್ ಗಾಂಧಿ ಅವರು ನಿಮಗಿಂತ ಜ್ಯೂನಿಯರಾ? ಸೀನಿಯರಾ? ರಾಹುಲ್ ಗಾಂಧಿ ಮುಂದೆ ನೀವು ಹೇಗೆ ಮಾತನಾಡುತ್ತೀರಿ? ಅವರ ಮುಂದೆ ಕಾಲಮೇಲೆ ಕಾಲು ಹಾಕಿಕೊಂಡು ಕೂತ್ಕೋತಿರೋ? ಎಂದು ಪ್ರಶ್ನಿಸಿದರು
ನಮ್ಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕದ ಚಾಣಕ್ಯ. ಕೇಂದ್ರದಲ್ಲಿ ಇರೋದು ನಮ್ಮದೇ ಸರ್ಕಾರ. ಹೀಗಿರುವಾಗ ಹೆದರಿಕೆ ಏಕೆ? ಪ್ರಧಾನಿಗಳಿಗೆ ಏನು ಗೌರವ ಕೊಡಬೇಕು, ಪ್ರಧಾನಿ ಸ್ಥಾನಕ್ಕೆ ಏನು ಗೌರವ ಕೊಡಬೇಕೋ ಅದನ್ನು ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ ಎಂದು ಹೇಳಿದರು.
ಕೋವಿಡ್ ಗೆ ಮುಂಚೆ ಸಿದ್ದರಾಮಯ್ಯ ಚೆನ್ನಾಗಿದ್ದರು. ಎರಡು ಬಾರಿ ಕೋವಿಡ್ ಬಂದ ಮೇಲೆ ಇಂಜೆಕ್ಷನ್ ತೆಗೆದುಕೊಳ್ಳಿ ಎಂದು ಹೇಳಿದೆ. ಯಾಕೋ ಇತ್ತೀಚೆಗೆ ಏನೇನೋ ಮಾತನಾಡುತ್ತೀರಿ, ಬೂಸ್ಟ್ ಡೋಸ್ ತೆಗೆದುಕೊಳ್ಳಿ ಸಿದ್ದರಾಮಯ್ಯ ಅವರೇ ಎಂದು ಹೇಳಿದೆ. ಡಾ.ಸುಧಾಕರ್ ಅವರಿಗೆ ಹೇಳಿ ಡೋಸ್ ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.