ಲಂಡನ್: ಹೊಸ ವರ್ಷವನ್ನು ಇಡೀ ಜಗತ್ರು ಅದ್ಧೂರಿಯಾಗಿ ಸ್ವಾಗತಿಸಿದೆ. ಎಲ್ಲೆಲ್ಲೂ ಬಗೆಬಗೆಯ ಕಾರ್ಯಕ್ರಮಗಳು ಯುವಜನರಲ್ಲಿ ಉತ್ಸಾಹದ ಕಿಚ್ಚು ಹಚ್ಚಿದೆ. ಇನ್ನೂ ಕೆಲವೆಡೆ ಜ್ಞಾನ ದೀವಿಗೆ ಹಚ್ಚಿ ಜಾಗೃತಿ ಸಂದೇಶ ಸಾರಿದ ಸನ್ನಿವೇಶಗಳೂ ಗಮನಸೆಳೆದಿವೆ. ಇದೇ ಸಂದರ್ಭದಲ್ಲಿ ಲಂಡನ್ನಲ್ಲೊಂದು ಪುಟ್ಟ ಕನ್ನಡದ ಹಬ್ಬ ಜಗತ್ತಿನ ಗಮನ ಕೇಂದ್ರೀಕರಿಸಿತು.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಡೆದ ಕಾರ್ಯಕ್ರಮವೊಂದು ಲಂಡನ್ನಲ್ಲಿ ಕನ್ನಡದ ಕಂಪನ್ನು ಪಸರಿಸಿತು. ಈ ಕಾರ್ಯಕ್ರಮದಲ್ಲಿ ಕಲಬುರಗಿಯ ಶಾಸಕ ಬಸವರಾಜ ಮಟ್ಟಿಮಡ್ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ, ಲಂಡನ್ನಲ್ಲಿರುವ ಬಸವೇಶ್ವರರ ಪ್ರತಿಮೆಗೆ ಶಾಸಕ ಬಸವರಾಜ ಮಟ್ಟಿಮಡ್ ಮಾಲಾರ್ಪಣೆ ಮಾಡಿದರು. ಬಸವೇಶ್ವರ ಮೂರ್ತಿಗೆ ಪುಷ್ಪನಮನ ಸಲ್ಲಿಸಿ, ವಿಭೂತಿ ನಮನ ಸಲ್ಲಿಸಿದರು.
ಸಮಾನತೆಯ ಹರಿಕಾರನ ಸ್ಮರಣೆ..
ಜಗತ್ತಿಗೆ ಸಮಾನತೆಯ ಹರಿಕಾರನೆನಿಸಿರುವ ಜಗಜ್ಯೋತಿ ಬಸವಣ್ಣರ ಪ್ರತಿಮೆಯನ್ನು ಲಂಡನ್ನ ಥೇಮ್ಸ್ ನದಿ ದಡದಲ್ಲಿ ಸ್ಥಾಪಿಸಲಾಗಿದೆ. ಲಂಡನ್ನಲ್ಲಿರುವ ಭಾರತ ಮೂಲದ, ಕನ್ನಡಿಗ ನೀರಜ್ ಪಾಟೀಲ್ ಅವರು ಲಂಡನ್ ಮೇಯರ್ ಆಗಿದ್ದ ಸಂದರ್ಭದಲ್ಲಿ, 2015ರಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಭಾರತೀಯರ ಹಬ್ಬ ಹರಿದಿನಗಳಂದು ಈ ಪುತ್ಥಳಿ ಬಳಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದೆ. ಅದರಂತೆ ಹೊಸವರ್ಷಾರಂಭದ ಕಾರ್ಯಕ್ರಮವೂ ನೆರವೇರಿತು. ಯುಕೆ ಮೂಲದ ಬಸವ ಸಮಿತಿ ಮತ್ತು ದಿ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಬಸವರಾಜ್ ಮಟ್ಟಿಮಡ್ ಅವರನ್ನು ಈ ಬಸವ ಪ್ರತಿಮೆ ಬಳಿ ಸನ್ಮಾನಿಸಿ ಗೌರವಿಸಲಾಯಿತು. ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಅಭಿಜೀತ್ ಸಾಲಿಮಠ ಸಹಿತ ಹಲವರು ಉಪಸ್ಥಿತರಿದ್ದರು.
ಈ ನಡುವೆ, ಬ್ರಿಟನ್ನಲ್ಲಿರುವ ಭಾರತೀಯರನ್ನು ಹಾಗೂ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಬಸವರಾಜ್, ಬ್ರಿಟಿಷ್ ಸಂಸತ್ತಿನ ಎದುರು ಭಾರತೀಯ, ಪ್ರಜಾಪ್ರಭುತ್ವದ ಪ್ರವರ್ತಕರೆನಿಸಿದ ಸಮಾನತೆಯ ಹರಿಕಾರನ ಪ್ರತಿಮೆಯನ್ನು ನೋಡುವುದು ಪ್ರತಿಯೊಬ್ಬ ಭಾರತೀಯ ಮತ್ತು ಕನ್ನಡಿಗನಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಪ್ರತಿಮೆ ಸ್ಥಾಪನೆಗೆ ಶ್ರಮಿಸಿದ ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನವನ್ನು ಅಭಿನಂದಿಸಿದ ಅವರು, ಯುಕೆಯಲ್ಲಿ ನಮ್ಮ ಶ್ರೀಮಂತ ಕನ್ನಡ ಸಂಸ್ಕೃತಿ, ಪರಂಪರೆಯನ್ನು ಹರಡಲು ಬ್ರಿಟಿಷ್ ಕನ್ನಡ ಸಮುದಾಯದ ಪ್ರಯತ್ನಗಳನ್ನು ಶ್ಲಾಘಿಸಿದರು.
ಹೀಗಿದೆ ಬಸವ ಪುತ್ಥಳಿಯ ಐತಿಹ್ಯ..?
ಮನುಕುಲಕ್ಕೆ ಸಮಾನತೆಯ ಸೂತ್ರವನ್ನು ಸಾರಿರುವುದು ಕರುನಾಡ ಶ್ರೇಷ್ಠರಾದ ಜಗಜ್ಯೋತಿ ಬಸವೇಶ್ವರರು. ಕನ್ನಡ ನೆಲದ ಸಂತನ ಪ್ರತಿಮೆಯನ್ನು ಸಾಗರೋತ್ತರ ದೇಶದಲ್ಲಿ ಸ್ಥಾಪಿಸುವುದು ಕನಸಿನ ಮಾತು. ಆದರೂ ಡಾ.ನೀರಜ್ ಪಾಟೀಲ್ ಅವರ ಇಚ್ಚಾಶಕ್ತಿಯು ಇದನ್ನು ಸಾಕಾರಗೊಳಿಸಿದ್ದೇ ಒಂದು ಇತಿಹಾಸ.
2012ರ ಏಪ್ರಿಲ್ನಲ್ಲಿ ಲಂಡನ್ ಬರೋ ಆಫ್ ಲ್ಯಾಂಬೆತ್ನ ಯೋಜನಾ ವಿಭಾಗಕ್ಕೆ ಪ್ರತಿಮೆ ಸ್ಥಾಪನೆಯ ಪ್ರಸ್ತಾಪ ಮುಂದಿಲಡಲಾಗಿತ್ತು. ಅದು ಅನುಮೋದನೆಗೊಂಡ ನಂತರ ಬ್ರಿಟಿಷ್ ಸಾರ್ವಜನಿಕ ಪ್ರತಿಮೆಗಳ ಕಾಯಿದೆ, 1854 ರ ಪ್ರಕಾರ ಬ್ರಿಟಿಷ್ ಕ್ಯಾಬಿನೆಟ್ 2012 ಜುಲೈನಲ್ಲಿ ಅನುಮೋದಿಸಿತು. ಅದರಂತೆ,
ಆಲ್ಬರ್ಟ್ ಏಣಿಯಲ್ಲಿ ಸ್ಥಾಪಿಸಲಾದ ಬಸವೇಶ್ವರ ಪ್ರತಿಮೆಯು ಎಲ್ಲರ ಕುತೂಹಲದ ಕೇಂದ್ರ ಬಿಂದುವಾಯಿತು.ಬ್ರಿಟಿಷ್ ಸಂಸತ್ತಿನ ಸಮೀಪದಲ್ಲಿ ಬ್ರಿಟಿಷ್ ಕ್ಯಾಬಿನೆಟ್ ಅನುಮೋದಿಸಿದ ಮೊದಲ ಪರಿಕಲ್ಪನಾ ಪ್ರತಿಮೆ ಇದಾಗಿದ್ದು, 2015ರ ನವೆಂಬರ್ 14ರಂದು ಭಾರತದ ಆಗಿನ ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟಿಷ್ ಸಂಸತ್ತಿನ ಸ್ಪೀಕರ್ ಆರ್ಟಿ ಗೌರವಾನ್ವಿತ ಜಾನ್ ಬರ್ಕೋ ಅವರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಿದ್ದರು. ಬ್ರಿಟಿಷ್ ಸಂಸತ್ ಆವರಣಕ್ಕೆ ಭೇಟಿ ನೀಡುವ ಜಗತ್ತಿನ ಗಣ್ಯರ ಪಾಲಿಗೆ ಈ ಬಸವ ಪ್ರತಿಮೆ ಸಮಾನತೆಯ ಶಕ್ತಿಯಾಗಿ ಗಮನಕೇಂದ್ರೀಕರಿಸುತ್ತಿದೆ.