ಬೆಂಗಳೂರು: ಅಮುಲ್ ಜೊತೆ ಕೆಎಂಎಫ್ ವಿಲೀನ ಕುರಿತ ಕೇಂದ್ರ ಸಚಿವ ಅಮಿತ್ ಶಾ ಪ್ರಸ್ತಾಪಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಎಂಎಫ್ ಹಾಗೂ ಅಮೂಲ್ ವಿಲೀನ ಬಗ್ಗೆ ಶಾ ಅವರು ಹೇಳಿರುವ ಮಾತನ್ನು ರಾಜ್ಯ ಸಹಕಾರಿ ಸಚಿವ ಸೋಮಶೇಖರ್ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ನಿರ್ಣಯದ ಮೂಲಕ ಪ್ರಸ್ತಾಪಿಸಲಿ ಎಂದು ಸವಾಲು ಹಾಕಿದ್ದಾರೆ.
ಇದು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ನಾನೂ ಸಹಕಾರ ಸಚಿವನಾಗಿದ್ದೆ. ನಮ್ಮ ಹಾಲು, ನಮ್ಮ ನೀರು, ನಮ್ಮ ಜನ, ನಮ್ಮ ಹಕ್ಕು. ನಮ್ಮ ಕನಕಪುರದಲ್ಲಿ ಅಮೂಲ್ ಕಂಪನಿಗಿಂತ ದೊಡ್ಡ ಹಾಲು ಉತ್ಪಾದನೆ ಘಟಕ ಇದೆ. ಬೆಂಗಳೂರಿನ ಕೆಎಂಎಫ್, ಮಂಡ್ಯ, ಹಾಸನ ಸೇರಿದಂತೆ ಎಲ್ಲ ಕಡೆಗಳಲ್ಲಿ ನಮ್ಮ ರೈತರು ಹಾಲು ಒಕ್ಕೂಟ ಸಂಸ್ಥೆಗಳನ್ನು ಬೆಳೆಸಿದ್ದಾರೆ. ನಮ್ಮ ಸಂಸ್ಥೆ ಲಾಭದಲ್ಲಿ ನಡೆಯುತ್ತಿದೆ. ನಮ್ಮ ರೈತರನ್ನು ಶಕ್ತಿಶಾಲಿ ಮಾಡಬೇಕು. ನಮಗೆ ಬೇರೆ ರಾಜ್ಯಗಳ ಸಂಸ್ಥೆ ಜತೆ ವಿಲೀನ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಡಿಕೆಶಿ ಅಭಿಪ್ರಾಯಪಟ್ಟಿದ್ದಾರೆ. ಆ ಸಂಸ್ಥೆ ಕೂಡ ಉತ್ತಮ ಸಂಸ್ಥೆ ಇರಬಹುದು. ಅದರ ಜತೆ ಆರೋಗ್ಯಕರ ಸ್ಪರ್ಧೆ ಮಾಡುತ್ತೇವೆ. ಆ ಶಕ್ತಿ ರಾಜ್ಯದ ಹಾಲು ಉತ್ಪಾದಕರಿಗೆ ಇದೆ ಎಂಬುದನ್ನು ಮುಖ್ಯಮಂತ್ರಿಗೆ ಹೇಳಬಯಸುತ್ತೇನೆ’ ಎಂದವರು ಹೇಳಿದರು.
























































