ಬಳ್ಳಾರಿ: ಬಿಜೆಪಿಗೆ ಸೆಡ್ಡು ಹೊಡೆದು ಅಖಾಡಕ್ಕೆ ಧುಮುಕಿರುವ ಗಣಿಧಣಿ ಜನಾರ್ದನ ರೆಡ್ಡಿ, ಗಣಿನಾಡಿನಲ್ಲಿಂದು ತಮ್ಮ ನೇತ್ವದಲ್ಲಿ ಸ್ಥಾಪಿಸಿರುವ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ದ ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾರೆ.
ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕೆಲವು ದಿನಗಳ ಹಿಂದಷ್ಟೇ ಘೋಷಿಸಿದ್ದರು. ಇದೀಗ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಅವರು 2023ನೇ ರಾಜ್ಯ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿದ್ದಾರೆ. ಹೊಸವರ್ಷಾಚರಣೆ ಸಂದರ್ಭದಲ್ಲಿ ಲಕ್ಷ್ಮಿ ಅರುಣಾ ಅವರು ಪಕ್ಷದ ಅಧಿಕೃತ ಪ್ರಚಾರಕ್ಕೆ ಚಾಲನೆ ನೀಡಿದರು.
ಬಳ್ಳಾರಿ ಸಮೀಪದ ಬೆಣಕಲ್ ಗ್ರಾಮದಲ್ಲಿ ಕುರುಬ ಸಮುದಾಯದ ಕುರಿ ಗಂಗಾಧರ ಅವರ ಮನೆಯಲ್ಲಿ ಇಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಣ್ಯರ, ಬೆಂಬಲಿಗರ ಸಮ್ಮುಖದಲ್ಲಿ ಐದು ದಿನಿಸು ಧಾನ್ಯ, ಉತ್ತುತ್ತಿ, ಕೊಬ್ಬರಿ ಬಟ್ಟಲು, ಅರಿಶಿನ ಕೊಂಬು, ಬೆಳ್ಳುಳ್ಳಿಯನ್ನು ಲಕ್ಷ್ಮಿ ಅರುಣಾ ಅವರಿಗೆ ಉಡಿತುಂಬುವ ಮೂಲಕ ಪಕ್ಷದ ಪ್ರಚಾರಕ್ಕೆ ಮುನ್ನುಡಿ ಬರೆಯಲಾಯಿತು.
ಇದೇ ವೇಳೆ, ಲಕ್ಷ್ಮಿ ಅರುಣಾ ಅವರನ್ನು ಕುರುಬರ ಸಾಂಪ್ರದಾಯಿಕ ಮಂಗಳ ವಾದ್ಯ, ಡೊಳ್ಳು ಭಾರಿಸುತ್ತಾ ಬೆಂಬಲಿಗರು ಮೆರವಣಿಗೆಯಲ್ಲಿ ಕರೆದೊಯ್ದು ಸನ್ನಿವೇಶ ಅದ್ಧೂರಿ ಕ್ಷಣಕ್ಕೆ ಸಾಕ್ಷಿಯಾಯಿತು. ಇದೇ ವೇಳೆ ನೂತನ ಪಕ್ಷದ ಬಾವುಟವನ್ನು ಹಾರಿಸುವ ಮೂಲಕ ಬೆಂಬಲಿಗರು ರೆಡ್ಡಿ ನೇತೃತ್ವದ ಪಕ್ಷಕ್ಕೆ ಜೈಕಾರ ಹಾಕಿದರು.

























































