ಬೆಂಗಳೂರು: ಕರುನಾಡಿನ ಜನರ ಹೆಮ್ಮೆಯ ರಥ ‘ಕೆಎಸ್ಸಾರ್ಟಿಸಿ’ಗೆ ಇದೀಗ ಹೊಸತನದ ಸ್ಪರ್ಶ ಸಿಕ್ಕಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ಎಲೆಕ್ಟ್ರಿಕ್ ಬಸ್ ಸೇವೆ ದೇಶದ ಗಮನಸೆಳೆದಿದೆ.
ಸುಧಾರಿತ ಬಸ್ ಸೇವೆ ಇದೀಗ ರಾಜ್ಯದ ಅಂತರ್ ನಗರ ವ್ಯಾಪ್ತಿಯತ್ತ ವಿಸ್ತಾರಗೊಂಡಿದೆ. ಈ ಇಂಟರ್‌ಸಿಟಿ (Prototype) ಸೇವೆಗೆ ಸಾರಿಗೆ ಸಚಿವ ಶ್ರೀರಾಮುಲು ಅವರು ಶನಿವಾರ (ಡಿ.31) ಹಸಿರು ನಿಶಾನೆ ತೋರಿದ್ದಾರೆ. ಅಕರ್ಷಕ ವಿನ್ಯಾಸದ ಈ ಬಸ್ ಇದೀಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಭಾರತ ಸರ್ಕಾರದ “ಮೇಕ್ ಇನ್ ಇಂಡಿಯಾ” ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ 50 ಅಂತರ್ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ಸುಗಳನ್ನು ಮುಂದಿನ ದಿನಗಳಲ್ಲಿ ಕಾರ್ಯಾಚರಣೆಗೊಳಿಸಲಿದೆ.
ನಿಗಮವು ತನ್ನ ವಿದ್ಯುತ್ ವಾಹನಗಳಿಗೆ ಸ್ಪರ್ಧೆಯ ಮೂಲಕ ಸಾರ್ವಜನಿಕರಿಂದ ಸ್ವೀಕರಿಸಿದ ಹೆಸರುಗಳ ಮೂಲಕ ‘EV ಪವರ್ ಪ್ಲಸ್’ ಟ್ಯಾಗ್ ಲೈನ್ ‘ಅತ್ಯುತ್ತಮ ಅನುಭವ’, ‘EV Power Plus’ -e-Xperience e-levated’ ಎಂದು ಹೆಸರಿಸಲಾಗಿದೆ .

ಈ ಪ್ರಾಯೋಗಿಕ ಕಾರ್ಯಾಚರಣೆಯ ನಂತರ ಈ ಬಸ್‌ಗಳು ಮತ್ತಷ್ಟು ನಗರಗಳಿಗೆ ಸಂಚರಿಸಲಿವೆಯಂತೆ. ಸದ್ಯ ಈ ಕೆಳಗಿನ ನಗರಗಳ ನಡುವೆ ಈ ಬಸ್‌ಗಳ ಸಂಚಾರ ಆರಂಭಕ್ಕೆ ಉದ್ದೇಶಿಸಲಾಗಿದೆ.
- ಬೆಂಗಳೂರು-ಮೈಸೂರು
- ಬೆಂಗಳೂರು-ಮಡಿಕೇರಿ
- ಬೆಂಗಳೂರು-ವಿರಾಜಪೇಟೆ
- ಬೆಂಗಳೂರು-ದಾವಣಗೆರೆ
- ಬೆಂಗಳೂರು-ಶಿವಮೊಗ್ಗ
- ಬೆಂಗಳೂರು-ಚಿಕ್ಕಮಗಳೂರು

ಈ ಬಸ್ಸುಗಳ ಸುಗಮ ಸಂಚಾರಕ್ಕಾಗಿ ಚಾರ್ಜಿಂಗ್ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಲಾಗಿದೆ. ವಿದ್ಯುತ್ ವಾಹನಗಳ ಚಾರ್ಚಿಂಗ್ ಕೇಂದ್ರವನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಈಗಾಗಲೇ ಸ್ಥಾಪಿಸಲಾಗಿದೆ. ಈ ಕೆಳಕಂಡ ಸ್ಥಳಗಳಲ್ಲಿ ಚಾರ್ಚಿಂಗ್ ಕೇಂದ್ರ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ.
- ಮಡಿಕೇರಿ
- ವಿರಾಜಪೇಟೆ
- ದಾವಣಗೆರೆ
- ಶಿವಮೊಗ್ಗ
- ಚಿಕ್ಕಮಗಳೂರು
























































