ಕುಕ್ಕರ್ ಬ್ಲಾಸ್ಟ್ ಗಾಯಾಳು ಆಟೋ ಚಾಲಕ ಪುರುಷೋತ್ತಮ ಪೂಜಾರಿಯ ಮನೆ ನವೀಕರಣಕ್ಕೆ ಡಿ.30ರಂದು ಮುಹೂರ್ತ.. ಗುರುಬೆಳದಿಂಗಳು ಫೌಂಡೇಶನ್ ನೇತೃತ್ವ..
ಮಂಗಳೂರು: ಬಂದರು ನಗರಿ ಮಂಗಳೂರಿನಲ್ಲಿ ಇತ್ತೀಚೆಗೆ ಆಟೋ ರಿಕ್ಷಾದಲ್ಲಿ ಕುಕ್ಕರ್ ಸ್ಫೋಟಗೊಂಡು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಟೋ ಚಾಲಕ ಉಜ್ಜೋಡಿಯ ಪುರುಷೋತ್ತಮ ಪೂಜಾರಿಯವರ ಮನೆ ನವೀಕರಣ ಕಾಮಗಾರಿಗೆ ಡಿ.30ರಂದು ಬೆಳಗ್ಗೆ 10.10ಕ್ಕೆ ಮುಹೂರ್ತ ನೆರವೇರಲಿದೆ.
ಆಸ್ಪತ್ರೆಯಲ್ಲಿರುವ ಪುರುಷೋತ್ತಮ ಪೂಜಾರಿಯವರನ್ನು ‘ಗುರುಬೆಳದಿಂಗಳು ಫೌಂಡೇಶನ್’ ಅಧ್ಯಕ್ಷ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಂಡದೊಂದಿಗೆ ಭೇಟಿಯಾದ ಸ್ವಯಂಸೇವಕರ ಸಮೂಹವು ಅವರ ನೋವನ್ನು ಅರಿಯಿತು. ತನ್ನ ನೋವಿನ ಜತೆಗೆ ಬರುವ ಮೇ ತಿಂಗಳಿನಲ್ಲಿ ಮಗಳ ಮದುವೆ ನಿಗದಿಯಾಗಿದ್ದು, ಅದಕ್ಕಿಂತ ಮುನ್ನ ಮನೆ ನವೀಕರಣ ಮಾಡಬೇಕು ಎನ್ನುವ ನನ್ನ ಕನಸು ನನಸು ಮಾಡಲು ಸಾಧ್ಯವಾಗಿಲ್ಲ ಎಂಬ ದುಃಖವನ್ನು ಅವರು ವ್ಯಕ್ತಪಡಿಸಿದ್ದರು. ಈ ವೇಳೆ ಮನೆಯನ್ನು ನವೀಕರಿಸುವ ಜವಾಬ್ದಾರಿಯನ್ನು ಗುರುಬೆಳದಿಂಗಳು ಫೌಂಡೇಶನ್ ವಹಿಸಲಿದೆ ಎಂದು ಪದ್ಮರಾಜ್‌ರವರು ಆತ್ಮಸ್ಥೈರ್ಯ ತುಂಬಿದ್ದರು. ಅದರಂತೆ ಗುರುಬೆಳದಿಂಗಳು ಫೌಂಡೇಶನ್ ನೇತೃತ್ವದಲ್ಲಿ ಮನೆ ನವೀಕರಣಗೊಳ್ಳಲಿದೆ. ನವೀಕರಣ ಕಾರ್ಯಕ್ಕೆ ಗುರುಬೆಳದಿಂಗಳು ಜತೆ ಬಿಲ್ಲವ ಬ್ರಿಗೇಡ್ ಸಂಪೂರ್ಣ ಸಹಕಾರ ನೀಡಲಿದೆ ಎಂದು ಪದ್ಮರಾಜ್ ತಿಳಿಸಿದ್ದಾರೆ.
























































