ಬೆಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಅಹೋರಾತ್ರಿ ಸತ್ಯಾಗ್ರಹಕ್ಕೆ, ರೈತ ಹೋರಾಟದ 38ನೇ ದಿನವಾದ ಇಂದು ರೋಚಕತೆಯ ತಿರುವು ಸಿಕ್ಕಿದೆ. ಈವರೆಗೂ ಧರಣಿ, ರಸ್ತಾ ರೋಖೋ, ಬಾರ್ ಕೋಲು ಚಳುವಳಿ ಸಹಿತ ವಿವಿಧ ರೀತಿಯ ಹೋರಾಟಕ್ಕೂ ಸರ್ಕಾರ ಸ್ಪಙಧಿಸಿಲ್ಲ. ಹಾಗಾಗಿ ಇದೀಗ ಹೋರಾಟನಿರತ ರೈತರು ನಿರಂತರ ಉಪವಾಸ ಆರಂಭಿಸಿದ್ದಾರೆ
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ 38ನೇ ದಿನವಾದ ಇಂದು ಆಹೋರಾತ್ರಿ ಧರಣಿ ನಿರತ ರೈತರು ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಮೂರು ದಿನದಿಂದ ಸರದಿ ಉಪವಾಸ ಸತ್ಯಾಗ್ರಹ ನಡೆಸಿದ ರೈತರು, ರಾಜ್ಯ ಸರ್ಕಾರ ನಿರ್ಲಕ್ಷ ಕಂಡಿಸಿ ಇಂದಿನಿಂದ ನಿರಂತರ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಮುಖ್ಯಮಂತ್ರಿಯವರ ಬರಿ ಮಾತಿನ ಭರವಸೆಯಿಂದ ರೈತರ ಹೊಟ್ಟೆ ತುಂಬುವುದಿಲ್ಲ ನುಡಿದಂತೆ ನಡೆಯಬೇಕು, ನ್ಯಾಯ ಸಮ್ಮತವಾಗಿ ಕಬ್ಬು ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಈ ಹೋರಾಟ ನಡೆಯುತ್ತಿದೆ. ರೈತ ಮುಖಂಡರುಗಳಾದ ಹಳಿಯಾಳದ ಕುಮಾರ್ ಬುಬಾಟಿ, ಶಂಕರ್ ಕಾಜಗಾರ್, ವೆಂಕಟೇಶ್ ಲಕ್ಷ್ಮಿಪುರ, ಮಹದೇವ್ ವಾಜಮಂಗಲ, ಮರಿಚನ್ನಯ್ಯ, ನಾಗರಾಜ್, ಪ್ರಕಾಶ್, ದಯಾನಂದ ಮರಾಠಿ, ಕುತ್ಗುದೀನ್ ನದಾಫ್, ಸುರೇಶ ಪಾಟೀಲ್ ಅವರು ನಿರಂತರ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಾರೆ.
ಇದೇ ವೇಳೆ, ಮಂಡ್ಯದಲ್ಲಿ ಧರಣಿ ನಿರತ ರೈತರ ಮೇಲಿನ ಪೋಲಿಸ್ ದೌರ್ಜನ್ಯ ಖಂಡಿಸಿ ಕಪ್ಪು ಬಟ್ಟೆ ತಲೆಗೆ ಕಟ್ಟಿ ಧರಣಿ ನಡೆಸಿದರು.
ಮಂಡ್ಯದಲ್ಲಿ ನಿರಂತರವಾಗಿ ಕಬ್ಬು ಬೆಲೆ, ಹಾಲಿನ ಬೆಲೆ ಮತ್ತಿತರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಿದ್ದ ರೈತರನ್ನು ಬಂಧಿಸಿ, ಧರಣಿ ಮಾಡುತ್ತಿದ್ದ ಶಾಮಿಯಾನ ಟೆಂಟ್ ಗಳನ್ನು ಕಿತ್ತುಹಾಕಿ ಪೊಲೀಸ್ ದೌರ್ಜನ್ಯ ದಬ್ಬಾಳಿಕೆ ಎಸಗಿರುವುದು ಖಂಡನೀಯ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ಹೊರಹಾಕಿದರು. ಪೊಲೀಸ್ ದಬ್ಬಾಳಿಕೆ ಮೂಲಕ ರೈತ ಚಳುವಳಿಯನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುವುದು ಖಂಡನಿಯ ಎಂದ ಅವರು, ಚಳುವಳಿ ನಡೆಸುತ್ತಿದ್ದ ವೇದಿಕೆಯನ್ನು ಕಿತ್ತು ಎಸೆದು ರೈತರನ್ನು ಬಂಧಿಸುವುದು ಹೇಡಿತನದ ವರ್ತನೆ, ಇಂಥ ಬೆದರಿಕೆಗೆ ರೈತರು ಬಗುವುದಿಲ್ಲ ಎಂಬುದನ್ನು ಸರ್ಕಾರ ಅರಿಯಲಿ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಓಲೈಕೆ ಮಾಡಲು ಪೊಲೀಸ್ ಬಲ ಉಪಯೋಗಿಸಿಕೊಳ್ಳುವುದು ಮೂರ್ಖತನದ ಪರಮಾವಧಿ, ರೈತ ಮುಖಂಡರನ್ನು ಬಂಧಿಸುವುದು, ಚಳುವಳಿಯನ್ನು ದಿಕ್ಕು ತಪ್ಪಿಸುವುದು ಪೊಲೀಸ್ ಬಲದ ಮೂಲಕ ಹತ್ತಿಕುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ರಾಜ್ಯದ ರೈತರು ಎಲ್ಲವನ್ನ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸುತ್ತಿದ್ದೇವೆ ಎಂದು ಕುರುಬೂರು ಶಾಂತಕುಮಾರ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
























































