ಮಂಗಳೂರು: ಫ್ಯಾನ್ಸಿ ಸ್ಟೋರ್ ಮಾಲಕ ಜಲೀಲ್ ಎಂಬವರ ಕೊಲೆ ಘಟನೆ ನಡೆದ ಸುರತ್ಕಲ್ ಸಮೀಪದ ಕೃಷ್ಣಾಪುರ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸುರತ್ಕಲ್, ಪಣಂಬೂರು, ಬಜಪೆ, ಕಾವೂರು ಠಾಣಾ ವ್ಯಾಪ್ತಿಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಶನಿವಾರ ರಾತ್ರಿ ದುಷ್ಕರ್ಮಿಗಳು ಜಲೀಲ್ ಅವರನ್ನು ಚೂರಿಯಿಂದ ಇರಿದಿದ್ದರು. ರಕ್ತದ ಮಡುವಿನಲ್ಲಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕುಳಿಯಲಿಲ್ಲ.
ಆಯುಕ್ತರಿಂದ ಕ್ಷಿಪ್ರ ಕ್ರಮ..
ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಬಳಿಕ ಈ ಪ್ರದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಮುಂಜಾಗ್ರತಾ ಕ್ರಮಕ್ಕೆ ಆದೇಶಿಸಿದ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್, ಯಾವುದೇ ದ್ವೇಶಮಯ ಘಟನೆಗಳು ನಡೆಯದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ನಡುವೆ, ಇಂದು ಬೆಳಿಗ್ಗೆ 6 ಗಂಟೆಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ. ಡಿಸೆಂಬರ್ 27ರ ಬೆಳಗ್ಗೆ 6 ಗಂಟೆವರೆಗೂ ಸುರತ್ಕಲ್, ಪಣಂಬೂರು, ಬಜಪೆ, ಕಾವೂರು ಠಾಣಾ ವ್ಯಾಪ್ತಿಗಳಲ್ಲಿ ಸೆಕ್ಷನ್144 ನಂತೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ, ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಅಲ್ಲದೆ, ಈ ಠಾಣೆಗಳ ವ್ಯಾಪ್ತಿಯಲ್ಲಿ ರಾತ್ರಿ ಸಂಚಾರ ನಿರ್ಬಂಧಿಸಲಾಗಿದ್ದು, ಎಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿನ ಕೆಲಸ ಕಾರ್ಯಗಳನ್ನು ಸಂಜೆ 6 ಗಂಟೆಯ ಒಳಗಾಗಿ ಪೂರ್ಣಗೊಳಿಸುವಂತೆ ಪೊಲೀಸರು ಸಲಹೆ ಮಾಡಿದ್ದಾರೆ.
























































