ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ ವಿಧಿವಶರಾಗಿದ್ದಾರೆ.
ಕರುನಾಡಿನ ಗಂಡುಕಲೆ ಯಕ್ಷಗಾನದ ಹಿರಿಯ ಕಲಾವಿದರಾಗಿದ್ದ ಅವರು, ಪೌರಾಣಿಕ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಯಾವುದೇ ಕಥಾ ಪ್ರಸಂಗವೇ ಇರಲಿ ಪ್ರಮುಖ ಪಾತ್ರವನ್ನು ಕುಂಬ್ಳೆ ಸುಂದರ ರಾವ್ ಅವರೇ ಮಾಡುತ್ತಿದ್ದರು. ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಇವರ ಅಭಿನಯವೇ ಆಕರ್ಷಣೆ ಎಂಬಂತಿತ್ತು.
ಇವರ ಪ್ರತಿಭೆ, ಪಾತ್ರದಲ್ಲಿನ ಆಕರ್ಷಣೆ ಮೂಲಕವೇ ಅಭಿಮಾನಿಗಳ ಸಾಮ್ರಾಜ್ಯವನ್ನೇ ಅವರು ಕಟ್ಟಿದ್ದರು. ಈ ಮೂಲಕ ಪ್ರಭಾವಿಯಾಗಿದ್ದ ಇವರನ್ನು ದಕ್ಷಿಣ ಕನ್ನಡದ ಜನತೆ ಶಾಸಕರನ್ನಾಗಿ ಆಯ್ಕೆ ಮಾಡಿದ್ದರು.
ಇಳಿ ವಯಸ್ಸಿನಲ್ಲಿಯೂ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮದೇ ಆದ ಅಭಿನಯ ಕೌಶಲ್ಯ ಪ್ರದರ್ಶಿಸುತ್ತಿದ್ದ ಕುಂಬ್ಳೆ ಸುಂದರ ರಾವ್ ಅವರು ಇನ್ನು ನೆನಪು ಮಾತ್ರ. ಕುಂಬ್ಳೆ ಸುಂದರ ರಾವ್ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.