ಬೆಂಗಳೂರು: ರೌಡಿ ಶೀಟರ್ ಸಸೈಲೆಂಟ್ ಸುನಿಲ್ ಬಿಜೆಪಿ ನಾಯಕರೊಂದಿಗೆ ವೇದಿಕೆ ಹಂಚಿಕೊಂಡ ವಿಚಾರ ರಾಜಕೀಯ ಜಟಾಪಟಿಗೆ ಎಡೆಮಾಡಿಕೊಟ್ಟಿದೆ. ‘ಸೈಲೆಂಟ್’ ವಿಚಾರವನ್ನೇ ಅಸ್ತ್ರವಾಗಿಸಿರುವ ಕಾಂಗ್ರೆಸ್ ಪಕ್ಷ, ವಾಂಟೆಡ್ ಲಿಸ್ಟ್‌ನಲ್ಲಿರುವ ರೌಡಿಯನ್ನು ಪೊಲೀಸರು ಬಂಧಿಸುತ್ತಿಲ್ಲವೇಕೆ ಎಂದು ಪ್ರಶ್ನಿಸಿದೆ. ರೌಡಿಗಳು ಬಿಜೆಪಿ ನಾಯಕರ ಜೊತೆ ಗುರುತಿಸಿಕೊಂಡಿರುವ ಕಾರಣ ಪೊಲೀಸರೂ ಅಸಹಾಯಕರಾಗಿದ್ದಾರೆ ಎಂದು ಕೈ ನಾಯಕರು ವ್ಯಂಗ್ಯವಾಡಿದ್ದಾರೆ. ಬಿಜೆಪಿ ಕೂಡಾ ಕಾಂಗ್ರೆಸ್ ನಾಯಕರತ್ತ ವಾಗ್ಬಾಣ ಪ್ರಯೋಗಿಸಿದೆ. ಈ ಒಟ್ಟಾರೆ ರಾಜಕೀಯ ಜಟಾಪಟಿಯಲ್ಲಿ ಈಗಾಗಲೇ ಹೊಡೆತ ತಿಂದವರು, ಮುಂದೆ ಹೊಡೆತ ತಿನ್ನುವವರು ರಾಜಕೀಯ ‘ದಡ್ಡ’ರೇ ಹೊರತು ಪ್ರಬುದ್ಧರಲ್ಲ ಎಂಬುದು ರಾಜಕೀಯ ಪಂಡಿತರ ವಿಷ್ಲೇಷಣೆ.
ಬಿಜೆಪಿಗೇ ಹೆಚ್ಚು ಮುಜುಗರ..?
ಸೈಲೆಂಟ್ ಸುನಿಲ್ ಎಂಬ ಹೆಸರು ಪ್ರಸ್ತುತ ಬೆಂಗಳೂರಿನ ಭೂಗತ ಲೋಕದಲ್ಲಿ ಪವರ್ಫುಲ್. ಈ ‘ಸೈಲೆಂಟ್’ ವ್ಯಕ್ತಿ ಪೊಲೀಸರಿಗೆ ಬೇಕಿರುವುದೂ ಹೌದು. ಹೀಗಿರುವಾಗ ಅದೇ ವ್ಯಕ್ತಿ ಬಿಜೆಪಿ ಸಂಸದರ ಜೊತೆ ಸಾರ್ವಜನಿಕ ಸಮಾರಂಭವೊಂದರಲ್ಲಿ ವೇದಿಕೆ ಹಂಚಿಕೊಂಡ ವಿಷಯ ಪ್ರಜ್ಞಾವಂತರ ಟೀಕೆಗೆ ಗುರಿಯಾಗಿದೆ.
‘ಕೈ’ಯತ್ತ ವಾಕ್ಛಾಟಿ ಬೀಸಿದ ಬಿಜೆಪಿ:
ಕಾಂಗ್ರೆಸ್‌ನ ಟೀಕೆಗೆ ತಿರುಗೇಟು ನೀಡಿರುವ ಬಿಜೆಪಿ, ‘ರೌಡಿ ಕೊತ್ವಾಲ್ ಶಿಷ್ಯ ಡಿಕೆಶಿ ಅವರು ಕೆಪಿಸಿಸಿ ಅಧ್ಯಕ್ಷರಾಗಿಲ್ಲವೇ’ ಎಂದು ಪ್ರಶ್ನಿಸಿದೆ. ಗಲಿಬಿಲಿಯ ಪರಿಸ್ಥಿತಿಯಿಂದ ಪಾರಾಗಬೇಕಿದ್ದರೆ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸುವುದು ಬಿಜೆಪಿಗೆ ಅನಿವಾರ್ಯವಾಗಿದ್ದರಿಂದ ನಲಪಾಡ್ ಪ್ರಕರಣವನ್ನೂ ಮುನ್ನಲೆಗೆ ತಂದಿದೆ.
ಒಂದು ಕಾಲದಲ್ಲಿ ಕೊತ್ವಾಲ್‌ನ ನೆಚ್ಚಿನ ಶಿಷ್ಯ!
ತಿಹಾರ್ ಜೈಲಿನಿಂದ @INCKarnataka ರಾಜ್ಯಾಧ್ಯಕ್ಷ ಹುದ್ದೆಗೆ ಭಡ್ತಿ.
ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರ "ಆ ದಿನಗಳು" ಮರೆತು ಹೋಗಿದೆಯಾ? pic.twitter.com/AMXxJmLso1
— BJP Karnataka (@BJP4Karnataka) November 28, 2022
ಆದರೆ ಅಷ್ಟರಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ನಾಯಕರ ಇತಿಹಾಸವೇ ಅನಾವರಣ ಆಗತೊಡಗಿದೆ. ಬಿಜೆಪಿಗೆ ಎದಿರೇಟು ನೀಡಿರುವ ಕಾಂಗ್ರೆಸ್, ಅಮಿತ್ ಷಾ ಅವರ ಹಳೆಯ ಪ್ರಕರಣಗಳನ್ನು ಕೆದಕಿ ಕಮಲ ಪಕ್ಷದ ರಾಷ್ಟ್ರೀಯ ನಾಯಕರನ್ನೂ ಮುಜುಗರಕ್ಕೀಡಾಗುವಂತೆ ಮಾಡಿದೆ. ಕಾಂಗ್ರೆಸ್‌ನ ರಾಜಕೀಯ ಪಿತೂರಿಯಿಂದಾಗಿ ಅಮಿತ್ ಷಾ ಅವರು ಆರೋಪ ಎದುರಿಸಿದ್ದು ಇತಿಹಾಸವಾಗಿದ್ದರೂ ಅದನ್ನು ಬಿಜೆಪಿ ನಾಯಕರಿಂದ ಸಮರ್ಥಿಸಲು ಸಾಧ್ಯವಾಗಿಲ್ಲ.
ಇದೀಗ ಬಿಜೆಪಿಯೊಳಗಿನ ಅನೇಕ ನಾಯಕರ ಹಿನ್ನಲೆಯನ್ನು ಮುನ್ನಲೆಗೆ ತರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಈಗಿನ ಸರ್ಕಾರದಲ್ಲಿರುವ ಎಷ್ಟು ಮಂತ್ರಿಗಳು ಹಿಂದೆ ರೌಡಿ ಶೀಟರ್‌ಗಳಾಗಿದ್ದರು ಎಂಬ ಪಟ್ಟಿಯನ್ನು ಬಿಡುಗಡೆಗೊಳಿಸಲು ಕಾಂಗ್ರೆಸ್ ಸಿದ್ದತೆ ನಡೆಸಿದೆ. ಗೋಪಾಲಯ್ಯ, ಮುನಿರತ್ನ, ನಾರಾಯಣಗೌಡ, ರಾಮುಲು ಸಹಿತ ಹಲವರ ವಿಚಾರಗಳನ್ನೂ ಅನಾವರಣ ಮಾಡಲು ಕೈ ನಾಯಕರು ತಯಾರಿ ನಡೆಸಿದ್ದಾರೆ.
ಈ ನಡುವೆ, ಕೊಲೆ ಕೇಸ್‌ಗಳಲ್ಲಿ ಪಿತೂರಿಯ ಆರೋಪ ಹೊತ್ತು ಪ್ರಕರಣ ಎದುರಿಸಿದವರನ್ನು ರೌಡಿ ಶೀಟರ್ ಆಗಿ ಗುರುತಿಸುವುದು ಪೊಲೀಸರ ಪರಿಪಾಠ. ಕಿಡ್ನಾಪ್ ಪ್ರಕರಣಗಳಲ್ಲೂ ಹಾಗೆಯೇ. ಆದರೆ, ಈಶ್ವರಪ್ಪ ಆಪ್ತನ ಕಿಡ್ನಾಪ್ ಪ್ರಕರಣದ ಆರೋಪಿಯಾಗಿರುವ ಬಿಎಸ್‌ವೈ ಆಪ್ತನ ಮೇಲೇಕೆ ರೌಡಿ ಶೀಟರ್ ಹೆಸರು ದಾಖಲಿಸಿಲ್ಲ ಎಂಬ ಪ್ರಶ್ನೆ ಪ್ರತಿಧ್ವನಿಸಿದೆ. ಒಂದು ವೇಳೆ ಪೊಲೀಸರು ಸರಿಯಾದ ನಡೆ ಅನುಸರಿಸಿದ್ದರೆ ಬಿಎಸ್‌ವೈ ಆಪ್ತನೂ ರೌಡಿಶೀಟರ್ ಆಗುತ್ತಿರಲಿಲ್ಲವೇ ಎಂಬ ಮಾತುಗಳು ಪ್ರತಿಪಕ್ಷಗಳ ಪಾಳಯದಿಂದ ಕೇಳಿಬಂದಿದೆ.
ಈ ಬೆಳವಣಿಗೆ ಬಿಜೆಪಿ ನಾಯಕರನ್ನು ಇರುಸು-ಮುರುಸಿನ ಪರಿಸ್ಥಿತಿಯತ್ತ ತಳ್ಳಿದೆ. ‘ಸೈಲೆಂಟ್’ ವಿಚಾರದಿಂದ ಸಾರ್ವಜನಿಕರು ವೈಲೆಂಟ್ ಆಗಿದ್ದೆನೋ ಸಹಜ. ಇದರ ಲಾಭವನ್ನು ಪಡೆಯಲು ಪ್ರತಿಪಕ್ಷ ಪ್ರಯತ್ನಿಸಿರುವುದೂ ಸಾಮಾನ್ಯ ಬೆಳವಣಿಗೆ. ಆದರೆ ಬಿಜೆಪಿಯ ಸೋಷಿಯಲ್ ಮೀಡಿಯಾ ಶೂರರು ಪ್ರಯೋಗಿಸಿರುವ ಪ್ರತ್ಯಸ್ತ್ರ ತಿರುಗುಬಾಣವಾಗಿದೆ.
ಕದನ ವಿರಾಮ ಘೋಷಿಸಿದರೇ ಸಿಎಂ..?
ಕಾಂಗ್ರೆಸ್ ಪಕ್ಷದ ಟ್ವೀಟ್ ಗೆ ಸಂಬಂಧಿಸಿದಂತೆ ರೌಡಿ ಶೀಟರ್ ಗಳ ಕುರಿತಾದ ಪತ್ರಕರ್ತರ ಪ್ರಶ್ನೆಗೆ ನಾನು ಉತ್ತರಿಸಿದ್ದೇನೆ. ಇದನ್ನು ಇಷ್ಟಕ್ಕೆ ಸೀಮಿತವಾಗಿ ನೋಡಬೇಕು. ನಮ್ಮ ಪಕ್ಷವು ಯಾವುದೇ ರೌಡಿ ಶೀಟರ್ ಗಳಿಗೆ ಮನ್ನಣೆ ಕೊಡುವುದಿಲ್ಲ ಹಾಗೂ ಅವರನ್ನು ಸಹಿಸುವುದಿಲ್ಲ.
1/2— Basavaraj S Bommai (Modi Ka Parivar) (@BSBommai) November 29, 2022
ಕಾಂಗ್ರೆಸ್ ಪಕ್ಷ ಪ್ರಯೋಗಿಸುತ್ತಿರುವ ಪ್ರಬಲ ಅಸ್ತ್ರದಿಂದಾಗಿ ಬಿಜೆಪಿಗೆ ಈಗ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರದ ಸನ್ನಿವೇಶ ಎದುರಾಗಿದೆ. ಇದರಿಂದ ಬೆಚ್ಚಿರುವ ಕಮಲ ನಾಯಕರು ಕದನ ವಿರಾಮದ ಬಗ್ಗೆ ಚಿಂತಿಸುತ್ತಿದ್ದಂತಿದೆ. ಇದಕ್ಕೆ ಸಾಕ್ಷಿಯಾಗಿದೆ ಸಿಎಂ ಬೊಮ್ಮಾಯಿ ಅವರ ಟ್ವೀಟ್.. ‘ಇದನ್ನು ಇಷ್ಟಕ್ಕೆ ಸೀಮಿತವಾಗಿ ನೋಡಬೇಕು. ನಮ್ಮ ಪಕ್ಷವು ಯಾವುದೇ ರೌಡಿ ಶೀಟರ್ ಗಳಿಗೆ ಮನ್ನಣೆ ಕೊಡುವುದಿಲ್ಲ ಹಾಗೂ ಅವರನ್ನು ಸಹಿಸುವುದಿಲ್ಲ’ ಎಂದು ಸಿಎಂ ಬೊಮ್ಮಾಯಿ ಮಾಡಿರುವ ಟ್ವೀಟ್ ಕುತೂಹಲ ಮೂಡಿಸಿದೆ.