ಕಬ್ಬು ಬೆಳೆಗಾರ ರೈತರಿಗೆ ರೈತ ಮಹಿಳೆಯರ ಬಾರ್ ಕೋಲ್ ಚಳುವಳಿಯ ಬೆಂಬಲ.. ಅನ್ನದಾತರಿಂದ ರಾಜ್ಯ ಸರ್ಕಾರಕ್ಕೆ 4 ದಿನಗಳ ಗಡುವು.. ಎಚ್ಚರಿಕೆಯ ಸಂದೇಶ ರವಾನಿಸಿದ ಕುರುಬೂರು ಶಾಂತಕುಮಾರ್..
ಬೆಂಗಳೂರು: ತಮ್ಮದು ರೈತಪರ ಸರ್ಕಾರ ಎನ್ನುತ್ತಿರುವ ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಕಬ್ಬು ಬೆಳೆಗಾರರು ಸವಾಲು ಮುಂದಿಟ್ಟಿದ್ದಾರೆ. ಕಬ್ಬಿಗೆ ಸೂಕ್ತ ದರ ನಿಗದಿಪಡಿಸಬೇಕೆಂದು ಒತ್ತಾಯಿಸಿ ಬಹುಕಾಲದಿಂದ ನಡೆಯುತ್ತಿರುವ ಸರಣಿ ಹೋರಾಟ ಇದೀಗ ರಾಜಧಾನಿಯಲ್ಲಿ ಸಂಚಲನ ಸೃಷ್ಟಿಸಿದ್ದು ಆಡಳಿತಾರೂಢ ಬಿಜೆಪಿ ಪಾಲಿಗೂ ಸವಾಲೆಂಬಂತಾಗಿದೆ.
ಸಿಎಂ ಮನೆ ಮುಂದೆ ಠಿಕಾಣಿ ಹೂಡುವುದಾಗಿ ಹೇಳಿಕೊಂಡಿದ್ದ ಬೆಳೆಗಾರರು ಫ್ರೀಡಂ ಪಾರ್ಕ್ ಬಳಿ ಸತ್ಯಾಗ್ರಹ ನಡೆಸುತ್ತಿದ್ದು, ಈ ಅಹೋರಾತ್ರಿ ಧರಣಿ ಏಳನೇ ದಿನವೂ ಮುಂದುವರಿಯಿತು. ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಈ ಹೋರಾಟಕ್ಕೆ ಇಂದು ರಾಜ್ಯದ ವಿವಿಧ ಕಡೆಯಿಂದ ಬಂದಿದ್ದ ನೂರಾರು ರೈತ ಮಹಿಳೆಯರು ಸಾಥ್ ನೀಡಿದರು.
ಧರಣಿಯಲ್ಲಿ ಭಾಗವಹಿಸಿದ ವನಿತೆಯರ ಸಮೂಹ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ತಲೆಗೆ ಹಸಿರು ಟವಲ್ ಸುತ್ತಿ ಕೈಯಲ್ಲಿ ಬಾರ್ ಕೋಲ್ ಬೀಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ ವೈಖರಿಯೂ ಗಮನಸೆಳೆಯಿತು.
ರೈತ ಸಂಘಟನೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಜಿ.ವಿ ಲಕ್ಷ್ಮಿ ದೇವಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತನನ್ನು ಏಳು ದಿನಗಳಿಂದ ರಸ್ತೆಯಲ್ಲಿ ಮಲಗಿಸಿರುವ ಸರ್ಕಾರಕ್ಕೆ ರೈತರ ಕಷ್ಟಕ್ಕಿಂತ ಸಕ್ಕರೆ ಕಾರ್ಖಾನೆ ಮಾಲೀಕರ ಹಿತವೇ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು, ರೈತ ಮಹಿಳೆಯರು ಕಿತ್ತೂರ್ ರಾಣಿ ಚೆನ್ನಮ್ಮನ ಅವತಾರ ತಾಳುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಲಿ ಕಬ್ಬುದರ ಏರಿಕೆ ಮಾಡಲಿ ಎಂದರು.
ಇದೇ ವೇಳೆ, ರೈತ ಹೋರಾಟಗಾರರು ಮಾತನಾಡಿ, ಸರ್ಕಾರ ಪದೇ ಪದೇ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ಮಾಡುವ ನಾಟಕವಾಡದೆ, ಕಾನೂನಿನಂತೆ ಕಬ್ಬು ದರ ಏರಿಕೆಯ ನಿರ್ಧಾರ ಕೈಗೊಂಡು ತಾಕತ್ತು ತೋರಿಸಲಿ ಎಂದರು.
ಇಂದಿನ ಪ್ರತಿಭಟನೆಯಲ್ಲಿ ಮಹಿಳಾ ಘಟಕದ ಪ್ರಮುಖರಾದ ರೂಪ, ಚಂದ್ರಮಾ, ಹೋರಾಟಗಾರರಾದ ವಿರನಗೌಡ ಪಾಟೀಲ್ ಶಿವನಗೌಡ, ದರೆಪ್ಪಗೌಡ, ರಮೇಶ್ ಹೂಗಾರ್, ದೇವಕುಮಾರ, ಮಹಾಂತೇಶ್ ಮುಂತಾದವರು ಭಾಗಿಯಾಗಿ ಹೋರಾಟಕ್ಕೆ ಶಕ್ತಿ ತುಂಬಿದರು
























































