ಬೆಂಗಳೂರು: ಆಪರೇಷನ್ ಮತದಾರರ ಪಟ್ಟಿಗೆ ಕನ್ನ ಹಾಕಿರುವ ಪ್ರಕರಣ. ಈ ಪ್ರಕರಣ ಸಂಬಂಧ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವ ಅಶ್ವತ್ಥನಾರಾಯಣ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಅನೇಕ ನಾಯಕರ ದೂರು ನೀಡಿದ್ದಾರೆ. ಈ ಅಕ್ರಮದ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸಿರುವ ಕಾಂಗ್ರೆಸ್ ನಾಯಕರು ಪ್ರಕರಣದ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.
“ಆಪರೇಷನ್ ಕಮಲ’ದ ಮುಂದುವರಿದ ಭಾಗವಾದ “ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ’ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಗಂಭೀರ ಅಪರಾಧ ಪ್ರಕರಣ. ಈ ಬಗ್ಗೆ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಯವರ ಉಸ್ತುವಾರಿಯಲ್ಲಿಯೇ ನ್ಯಾಯಾಂಗ ತನಿಖೆ ಮಾಡಬೇಕು ಎಂಬುದು ಕಾಂಗ್ರೆಸ್ ನಾಯಕರ ಆಗ್ರಹ..
ಈ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಸಿದರೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಮಾತ್ರವಲ್ಲ ಚುನಾವಣಾ ಆಯೋಗ ಕೂಡಾ ಈ ಹೀನ ಕೃತ್ಯದಲ್ಲಿ ಭಾಗಿಯಾಗಿರುವ ಗುಮಾನಿಗಳಿವೆ. ಕೇಂದ್ರ ಚುನಾವಣಾ ಆಯೋಗ ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಎಐಸಿಸಿ ನಾಯಕ ಸುರ್ಜೀವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಿತ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಆಪರೇಷನ್ ಮತದಾರರ ಪಟ್ಟಿಯ ಅವಾಂತರಗಳನ್ನು ಅನಾವರಣ ಮಾಡಿದರು. ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ನಿಯೋಗ ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಗೆ ತೆರಳಿ ದೂರು ನೀಡಿತು.
ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಗಳು:
- ಮತದಾರರ ಪಟ್ಟಿಯ ಅಕ್ರಮ ಪರಿಷ್ಕರಣೆಯ ಹಗರಣ ನಡೆಸಿದ ಸಂಸ್ಥೆಯ ಹೆಸರು ರಾಜ್ಯದ ಸಚಿವರೊಬ್ಬರ ಒಡೆತನದ ಸಂಸ್ಥೆಯ ಹೆಸರಿನ ಜೊತೆ ತಾಳೆಯಾಗುವುದು ಕಾಕತಾಳಿಯವಾಗಿರಲಾರದು. ಅದೇ ರೀತಿ ಸಂಸ್ಥೆಯ ಕಚೇರಿ ಇರುವ ಸ್ಥಳದ ಸಮೀಪದಲ್ಲಿಯೇ ಈ ಸಂಶಯಿತ ಸಚಿವರ ಸಂಸ್ಥೆಗಳೂ ಇರುವುದು ಸಂಶಯವನ್ನು ಇನ್ನಷ್ಟು ಬಲಪಡಿಸುತ್ತದೆ. ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗದೆ ಇಂತಹದ್ದೊಂದು ಹಗರಣ ನಡೆಸಲು ಸಾಧ್ಯವಿಲ್ಲ, ಅಧಿಕಾರಿಗಳು ಸ್ವಯೀಚ್ಚೆಯಿಂದ ಇಷ್ಟೊಂದು ಬೇಜವಾಬ್ದಾರಿಯಿಂದ ನಡೆದುಕೊಳ್ಳಲು ಸಾಧ್ಯವಿಲ್ಲ. ಮುಖ್ಯಮಂತ್ರಿಯವರಿಂದ ಹಿಡಿದು ಹಿರಿಯ ಸಚಿವರೆಲ್ಲರೂ ಭಾಗಿಯಾಗಿಯೇ ಈ ಕೆಲಸ ಮಾಡಿದ್ದಾರೆ.
- ‘ಮೇಲಿನವರ’ ರಕ್ಷಣೆ ಇಲ್ಲದೆ ಮಹಾನಗರ ಪಾಲಿಕೆ ಯಾವುದೇ ಪೂರ್ವಪರ ಪರಿಶೀಲನೆ ನಡೆಸದೆ “ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಮತದಾರರ ಪಟ್ಟಿಯನ್ನು ಉಚಿತವಾಗಿ ಪರಿಷ್ಕರಣೆ ಮಾಡಲು ಅನುಮತಿ ನೀಡಲು ಹೇಗೆ ಸಾಧ್ಯ?
- ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾರರ ಮಾಹಿತಿ ಸಂಗ್ರಹದ ಕೆಲಸವನ್ನು ಚುನಾವಣಾ ಆಯೋಗ ಮಾಡಬೇಕಾಗಿದ್ದು ಖಾಸಗಿ ಸಂಸ್ಥೆಗೆ ಇದನ್ನು ಒಪ್ಪಿಸುವುದೇ ಅಪರಾಧವಾಗಿದೆ. ಬಿಬಿಎಂಪಿಯ ಅಧಿಕಾರಿಗಳೇ ಎಂದು ತಪ್ಪಾಗಿ ತಿಳಿದು ಮತದಾರರು ವೈಯಕ್ತಿಕ ಮಾಹಿತಿಯನ್ನು ನೀಡಿದ್ದಾರೆ. ಇದು ವಿಶ್ವಾಸ ದ್ರೋಹವಾಗಿದೆ.
- ಚಿಲುಮೆ ಸಂಸ್ಥೆಯ ಮಾಲೀಕ ಕೃಷ್ಣಪ್ಪ ರವಿಕುಮಾರ ಎಂಬವರು ಈ ಹಗರಣದ ರೂವಾರಿಯಾಗಿ ಮೇಲ್ನೋಟಕ್ಕೆ ಕಾಣಿಸಿದರೂ ಇದರ ಹಿಂದೆ ಸರ್ಕಾರದ ಉನ್ನತ ಸ್ಥಾನದಲ್ಲಿರುವವರ ಕೈವಾಡ ಖಂಡಿತ ಇದೆ. ಈ ಬಗ್ಗೆ ತನಿಖೆ ಮಾಡಿದರೆ ಮಾತ್ರ ಸತ್ಯ ಬಯಲಾಗಲು ಸಾಧ್ಯ.
- ಯಾವುದೋ ಒಂದು ಸಂಸ್ಥೆ ಅರ್ಜಿ ನೀಡಿ ತಾವು ಮತದಾರರನ್ನು ಜಾಗೃತಗೊಳಿಸುವ ಮತ್ತು ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕಾರ್ಯವನ್ನು ಉಚಿತವಾಗಿ ಮಾಡುವುದಾಗಿ ತಿಳಿಸಿದಾಗಲೇ ಸಂಸ್ಥೆಯ ಉದ್ದೇಶದ ಬಗ್ಗೆ ಸಂಶಯ ಮೂಡಬೇಕಿತ್ತು. ಹೀಗಿದ್ದರೂ 20 ಆಗಸ್ಟ್ 2022ರಂದು ಬಿಬಿಎಂಪಿ ಆಯುಕ್ತರು ಅನುಮತಿ ನೀಡಿದ್ದಾರೆ.
- ಜಾಹಿರಾತು ನೀಡದೆ. ಟೆಂಡರ್ ಕರೆಯದೆ ಬಿಬಿಎಂಪಿ ಒಂದು ಖಾಸಗಿ ಕಂಪನಿಗೆ ಈ ಕಾರ್ಯವನ್ನು ಈ ಕೆಲಸವನ್ನು ನೀಡಲು ಹೇಗೆ ಸಾಧ್ಯ? ಅನುಮತಿ ನೀಡುವಾಗ ಸಂಸ್ಥೆಯ ಹಿನ್ನೆಲೆಯನ್ನು ಯಾಕೆ ಪರಿಶೀಲಿಸಿಲ್ಲ? ಉಚಿತ ಸೇವೆ ನೀಡುವ ಉದ್ದೇಶದ ಹಿನ್ನೆಲೆಯನ್ನು ಯಾಕೆ ತಿಳಿದುಕೊಂಡಿಲ್ಲ?
- ಚಿಲುಮೆ ಕಂಪನಿಯವರು ಬಿಬಿಎಂಪಿ ಮೂಲಕ ತಮ್ಮ ನೌಕರರಿಗೆ ಬೂತ್ ಮಟ್ಟದ ಅಧಿಕಾರಿ ಎಂಬ ಗುರುತಿನ ಚೀಟಿ ನೀಡಿದ್ದೇ ಅಕ್ರಮವಾಗಿದೆ. ಕಾನೂನಿನ ಪ್ರಕಾರ ಸರ್ಕಾರಿ, ಅರೆ ಸರ್ಕಾರಿ ಹಾಗೂ ನಿವೃತ್ತ ಸರ್ಕಾರಿ ನೌಕರರಲ್ಲದವರು ಬೂತ್ ಲೆವೆಲ್ ಆಫೀಸರ್ ಆಗಲು ಅವಕಾಶ ಇಲ್ಲ.
- ಈ ಹಗರಣ ಬಯಲಾಗಿರುವುದು ಗೊತ್ತಾದ ಕೂಡಲೇ ಬಿಬಿಎಂಪಿ ನಿಬಂಧನೆಗಳನ್ನು ಉಲ್ಲಂಘನೆಯ ಕಾರಣ ನೀಡಿ 16-11-2022ರಂದು ಮತಪಟ್ಟಿ ಪರಿಷ್ಕರಣೆಗಾಗಿ ಖಾಸಗಿ ಸಂಸ್ಥೆಗೆ ನೀಡಿರುವ ಗುತ್ತಿಗೆ ಆದೇಶವನ್ನು ರದ್ದು ಮಾಡಿದ್ದರೂ ರದ್ದತಿಗೆ ಕಾರಣ ನೀಡದೆ ಇರುವುದು ಸಂಶಯಕ್ಕೆ ಕಾರಣವಾಗಿದೆ.
- ಚಿಲುಮೆ ಸಂಸ್ಥೆಯ ಜೊತೆಗಿನ ಒಪ್ಪಂದವನ್ನು ರದ್ದುಮಾಡಿಕೊಂಡಿರುವ ಸಂದರ್ಭದಲ್ಲಿ ಈ ವರೆಗೆ ಅವರು ಸಂಗ್ರಹಿಸಿರುವ ಮಾಹಿತಿಯನ್ನು ಆ ಸಂಸ್ಥೆಯಿಂದ ಯಾಕೆ ಪಡೆದುಕೊಂಡಿಲ್ಲ? ಸಂಗ್ರಹಿಸಿದ ಮಾಹಿತಿಯನ್ನು ಬಿಬಿಎಂಪಿಗೆ ನೀಡಿದ್ದಾರೆಯೇ? ಬಿಬಿಎಂಪಿ ಅದನ್ನು ಹೇಗೆ ಬಳಸಿಕೊಂಡಿದೆ?
- ಸದ್ಯಕ್ಕೆ ಮತದಾರರ ಪಟ್ಟಿಯ ಅಕ್ರಮ ಪರಿಷ್ಕರಣೆ ಬೆಂಗಳೂರು ಮಹಾನಗರಕ್ಕಷ್ಟೇ ಸೀಮಿತವಾಗಿದ್ದರೂ ಶೀಘ್ರದಲ್ಲಿಯೇ ಇದನ್ನು ಬೇರೆ ಜಿಲ್ಲೆಗಳಿಗೂ ಈ ಯೋಜನೆಯನ್ನು ವಿಸ್ತರಿಸುವ ಯೋಚನೆ ಇತ್ತಂತೆ. ಈ ಬಗ್ಗೆಯೂ ತನಿಖೆ ನಡೆಯಬೇಕು.
- 40% ಭ್ರಷ್ಟಾಚಾರ ಮತ್ತು ಆಂತರಿಕ ಬಿಕ್ಕಟ್ಟಿನಲ್ಲಿ ಮುಳುಗಿಹೋಗಿರುವ ಬಿಜೆಪಿ ಸಾಧನೆಯ ಬಲದಿಂದ ಚುನಾವಣೆ ಗೆಲ್ಲುವ ವಿಶ್ವಾಸವನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ವಾಮಮಾರ್ಗದಿಂದ ಗೆಲ್ಲಲು ಸಂಚು ಹೂಡಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಗಳು ಮಾತ್ರವಲ್ಲ ಬಿಜೆಪಿ ಪಕ್ಷವೇ ಷಾಮೀಲಾಗಿದೆ.
- ಇಂತಹ ಹಗರಣಗಳಿಂದ ಜನತೆ ಚುನಾವಣಾ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳಲಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಕೇಂದ್ರ ಚುನಾವಣಾ ಆಯೋಗ ತಕ್ಷಣ ಮಧ್ಯಪ್ರವೇಶಿಸಿ ತನಿಖೆಯಲ್ಲಿ ಸಹಕಾರ ನೀಡಬೇಕು.
- ಬೆಂಗಳೂರು ಮಹಾನಗರಪಾಲಿಕೆ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಈ ಹಗರಣವನ್ನು ನಡೆಸಿರುವಂತೆ ಮೇಲ್ನೊಟಕ್ಕೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಇಡೀ ರಾಜ್ಯಕ್ಕೆ ಈ ಆಪರೇಷನ್ ವಿಸ್ತರಿಸುವ ದುರುದ್ದೇಶ ಇದ್ದಂತಿದೆ.
- ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಆಯುಕ್ತರು ಹಾಗೂ ಇತರರ ವಿರುದ್ಧ ಇಂದೇ ದೂರು ದಾಖಲಿಸುತ್ತೇವೆ. ಈ ಕೂಡಲೇ ಬಸವರಾಜ ಬೊಮ್ಮಾಯಿ ಅವರನ್ನು ಬಂಧಿಸಬೇಕು. ಒಂದು ವೇಳೆ ಅವರ ವಿರುದ್ಧ ಎಫ್,ಐ,ಆರ್ ದಾಖಲಿಸದಿದ್ದರೆ ಮುಂದಿನ ಕ್ರಮವನ್ನು ನಾವು ಕೈಗೊಳ್ಳುತ್ತೇವೆ.
























































