ಜಗತ್ತಿನ ದಿಗ್ಗಜ ಸಂಸ್ಥೆ ‘ಅಮೆಜಾನ್’ ಇದೀಗ ಆರ್ಥಿಕ ಸಂಕಷ್ಟದ ಸುನಾಮಿಯ ಸುಳಿಯಲ್ಲಿ ಸಿಲುಕಿದೆ. ಮುಂದಿನ ದಿನಗಳ ಸಂಭವನೀಯ ಆರ್ಥಿಕ ಹಿಂಜರಿತದ ಆತಂಕದ ಹಿನ್ನೆಲೆಯಲ್ಲಿ ಮತ್ತಷ್ಟು ಸಂಕಷ್ಟದಿಂದ ಪಾರಾಗಲು ಇದೀಗ ‘ವಜಾಸ್ತ್ರ’ ಪ್ರಯೋಗಕ್ಕೆ ಅಮೆಜಾನ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬರೋಬ್ಬರಿ 10, ಸಾವಿರ ಮಂದಿ ಉದ್ಯೋಗಿಗಳನ್ನು ಸೇವೆಯಿಂದ ವಜಾ ಮಾಡುವ ಪ್ರಕ್ರಿಯೆಗೆ ‘ಅಮೆಜಾನ್’ ಸಂಸ್ಥೆಯು ಪ್ರಕ್ರಿಯೆ ಆರಂಭಿಸಿದೆ.
ಆದಾಯದಲ್ಲಿ ಕುಸಿತ, ಜಾಗತಿಕ ಆರ್ಥಿಕ ಅನಿಶ್ಚಿತತೆಯು ಜಗತ್ತಿನ ಪ್ರಮುಖ ಟೆಕ್ ಕಂಪೆನಿಗಳ ನಿದ್ದೆಗೆಡಿಸಿದೆ. ಡಿಜಿಟಲ್ ಜಾಹೀರಾತು ಆದಾಯದಲ್ಲಿ ಕುಸಿತ ಹಾಗೂ ಜಾಗತಿಕ ಆರ್ಥಿಕ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಸಂಭವನೀಯ ಆರ್ಥಿಕ ಪತನದಿಂದ ಪಾರಾಗಲು ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿಗಳು, ಮೈಕ್ರೋಸಾಫ್ಟ್, ಮೆಟಾ, ಟ್ವಿಟ್ಟರ್ ಹಾಗೂ ಸ್ನಾಟ್‌ಚಾಟ್ ಮುಂತಾದ ಸಂಸ್ಥೆಗಳು ಈಗಾಗಲೇ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾ ಮಾಡಿ ಭಾರೀ ಸುದ್ದಿಯಾಗಿವೆ. ಇದರ ಜೊತೆಯಲ್ಲೇ ಅಮೆಜಾನ್ ಕೂಡಾ ಅದೇ ರೀತಿಯ ನಿಷ್ಟೂರ ಕ್ರಮಕ್ಕೆ ಮುಂದಾಗಿದ್ದು ಔದ್ಯೋಗಿಕ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ಭಾರತದಲ್ಲಿ ಸುಮಾರು 1 ಲಕ್ಷ ಮಂದಿ ಅಮೆಜಾನ್ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಈ ಉದ್ಯೋಗಿಗಳ ಎದೆಬಡಿತ ಹೆಚ್ಚಾಗಿದೆ.
ಈ ನಡುವೆ, ವಜಾ ಭೀತಿಯಲ್ಲಿರುವ ನೌಕರರಿಗೆ ಅಮೆಜಾನ್ ಸಂಸ್ಥೆ ಆಫರ್ ಕೂಡಾ ನೀಡಿದೆ. ತಾವಾಗಿಯೇ ನೌಕರಿ ತ್ಯಜಿಸುವುದೇ ಆದರೆ 22 ವಾರಗಳ ಮೂಲ ವೇತನ ಜೊತೆಗೆ ಆರುತಿಂಗಳ ಕೆಲಸಕ್ಕೆ ಅನುಗುಣವಾಗಿ ಒಂದು ವಾರದ ಮೂಲ ವೇತನ, 6 ತಿಂಗಳ ವೈದ್ಯಕೀಯ ವಿಮಾ ಸೌಲಭ್ಯ, ಹಾಗೂ ನೋಟಿಸ್ ಅವಧಿಯ ವೇತನವನ್ನು ನೀಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ
























































