ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ತುಮಕೂರಿನಲ್ಲಿ ನಡೆದಿರುವ ಬಾಣಂತಿ ಮತ್ತು ಶಿಶುಗಳ ಸಾವಿನ ಪ್ರಕರಣ ಅಕ್ಷಮ್ಯ. ಈ ಬಗ್ಗೆ ಆರೆಸ್ಸೆಸ್-ಬಿಜೆಪಿ ನಾಯಕರೇ ಆಕ್ರೋಶಗೊಂಡಿದ್ದಾರೆ. ಬಹಳಷ್ಟು ಮಂದಿ ಆರೋಗ್ಯ ಸಚಿವರ ಕಾರ್ಯವೈಖರಿ ಬಗ್ಗೆಯೇ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರು: ಕಲ್ಪತರು ನಾಡಿನಲ್ಲಿ ನಡೆದಿರುವ ಬಾಣಂತಿ ಹಾಗೂ ಶಿಶುಗಳ ಸಾವಿನ ಪ್ರಕರಣ ರಾಜ್ಯದ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ. ಬಸವರಾಜ್ ಬೊಮ್ಮಾಯಿ ಸರ್ಕಾರದಲ್ಲಿ ಯಾವುದಾದರೂ ಸರಿಯಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುವಂತಿದೆ. ಇದು ಇನ್ಯಾರದ್ದೋ ಮಾತಲ್ಲ, ಸ್ವತಃ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರದ್ದು.
ಬಿಜೆಪಿ ಕಾರ್ಯಕರ್ತರಲ್ಲೇ ಬೊಮ್ಮಾಯಿ ಸರ್ಕಾರದ ಬಗ್ಗೆ ವ್ಯಾಪಕ ಅಸಮಾಧಾನವಿದೆ. ಭ್ರಷ್ಟಾಚಾರದ ವಿರುದ್ದದ ಕಾರ್ಯಕರ್ತರ ಹೋರಾಟದಿಂದಾಗಿ ಬಿಜೆಪಿ ಪಕ್ಷ ಆಡಳಿತಕ್ಕೆ ಬಂದಿದೆ. ಆದರೆ ಈಗಿರುವ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂಬುದು ಬಿಜೆಪಿ ಕಾರ್ಯಕರ ಅಸಮಾಧಾನದ ಮಾತುಗಳು.
ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರದ ಆಸ್ಪತ್ರೆಯಲ್ಲಿನ ಆಕ್ಸಿಜನ್ ದುರಂತ ಹಲವು ಜೀವಗಳನ್ನು ಬಲಿತೆಗೆದುಕೊಂಡಿತ್ತು. ಅದಾಗಲೇ ಆರೋಗ್ಯ ಸಚಿವ ಸುಧಾಕರ್ ಅವರ ಅಸಮರ್ಥತೆ ವಿರುದ್ದ ಇಡೀ ರಾಜ್ಯವೇ ರೊಚ್ಚಿಗೆದ್ದಿತ್ತು. ಅದರೆ ರಾಜ್ಯ ಸರ್ಕಾರದ ವಿರುದ್ದದ ಈ ಬೆಳವಣಿಗೆಯು ಮೋದಿ ಇಮೇಜ್‌ಗೂ ಅಡ್ಡಿಯಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರು ತಮ್ಮಲ್ಲಿನ ಆಕ್ರೋಶ-ಅಸಮಾಧಾನಗಳನ್ನು ಬಹಿರಂಗಪಡಿಸಲು ತಯಾರಾಗಲಿಲ್ಲ.
ಅನಂತರವೂ ಕೋವಿಡ್ ನಿರ್ವಹಣೆ ಸಹಿತ ಅನೇಕ ವಿಚಾರಗಳಲ್ಲಿನ ಅಕ್ರಮ ಆರೋಪಗಳೂ ಸುಧಾಕರ್ ಅವರ ಇಲಾಖೆಯ ವ್ಯಾಪ್ತಿಯಲ್ಲೇ ನಡೆದಿವೆ ಎಂಬ ಆರೋಪಗಳೂ ಕೇಳಿಬಂದಿವೆ. ಆದರೂ ಬಿಜೆಪಿ ಮುಖಂಡರು, ಆರೆಸ್ಸೆಸ್ ಧುರೀಣರು ಯಾವುದೇ ನಿಷ್ಟೂರ ನಿರ್ದೇಶನ ನೀಡಿಲ್ಲ ಎಂಬುದು ಕಾರ್ಯಕರ್ತರ ಆಸಮಾಧಾನ.
ಇದೀಗ ತುಮಕೂರು ಘಟನೆ ಬಗ್ಗೆ ಆರೆಸ್ಸೆಸ್ ಬಿಜೆಪಿ ಕಾರ್ಯಕರ್ತರೇ ಆಕ್ರೋಶಗೊಂಡಿದ್ದಾರೆ. ಸುಧಾಕರ್ ಅವರಿಂದ ಆರೋಗ್ಯ ಇಲಾಖೆಯನ್ನು ನಿರ್ವಹಿಸಲು ಸಾಧ್ಯವಾಗ್ತಾ ಇಲ್ಲ. ಆರೆಸ್ಸೆಸ್ ನಾಯಕರಿಗೆ ಇದು ಗೊತ್ತಿದ್ದರೂ ಸುಮ್ನನಿದ್ದಾರೇಕೆ ಎಂಬುದೇ ಗೊತ್ತಾಗುತ್ತಿಲ್ಲ ಎಂಬುದು ಕೇಸರಿ ಪಾಳಯದಲ್ಲಿ ಪ್ರತಿಧ್ವನಿಸುತ್ತಿರುವ ಮಾತುಗಳು.
ಆರೆಸ್ಸೆಸ್ ಶಾಖೆಗಳಲ್ಲಿ ಜಮಾಯಿಸಿದ ಕಾರ್ಯಕರ್ತರನ್ನು ಮಾತನಾಡಿಸಿದ ಸಂದರ್ಭದಲ್ಲೂ, ಇಂದಿನ ಮಾಧ್ಯಮ ವರದಿಗಳ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ‘ತುಮಕೂರು ಪ್ರಕರಣವು ಕ್ಷಮಿಸಲಾಗದ ಘಟನೆ’ ಎಂದಿದ್ದಾರೆ.
ತುಮಕೂರು ಘಟನೆ ಬಗ್ಗೆ ಆರೆಸ್ಸೆಸ್ ಹಿರಿಯ ಮುಖಂಡರೊಬ್ಬರನ್ನು ಉದಯಾ ನ್ಯೂಸ್ ಮಾತನಾಡಿಸಿದಾಗ ಅವರೂ ಕೂಡಾ ಸಚಿವ ಸುಧಾಕರ್ ಕಾರ್ಯವೈಖರಿ ಬಗ್ಗೆ ಸಿಟ್ಟು ಹೊರಹಾಕಿದ್ದೇ ಹೆಚ್ಚು. ‘ಸುಧಾಕರ್ ಅವರು ಬರೀ ಫೋಸ್ ಕೊಡ್ತಾ ಇದ್ದಾರೆ. ಸರ್ಕಾರದ ಸಾಧನಾ ಸಮಾವೇಶದಲ್ಲಿ ಸಿದ್ದರಾಮೋತ್ಸವಕ್ಕಿಂತಲೂ ಹೆಚ್ಚು ಜನರನ್ನು ಸೇರಿಸುವುದಾಗಿ ಹೇಳಿದ್ರು. ಆದರೆ ಸೇರಿಸಿದ್ದೆಷ್ಟು? ಆದುವೇ ಸಾಕಲ್ಲವೇ? ಬೇರೆ ಉದಾಹರಣೆ ಬೇಕಿದೆಯೇ? ಎಂದು ಸಿಟ್ಟು ವ್ಯಕ್ತಪಡಿಸಿದ್ದಾರೆ.
ಆರೆಸ್ಸೆಸ್ ನಾಯಕರು ಮನಸ್ಸು ಮಾಡಿದರೆ ಕೆಲವೇ ನಿಮಿಷಗಳಲ್ಲಿ ಸ್ಪಷ್ಟ ಕ್ರಮ ತೆಗೆದುಕೊಳ್ಳಬಹುದು. ಆದರೂ ಯಾಕೆ ಬದಲಾವಣೆಗೆ ಸೂಚಿಸಿಲ್ಲ ಎಂಬುದೇ ಗೊತ್ತಾಗುತ್ತಿಲ್ಲ ಎಂದು ವಿಹೆಚ್‌ಪಿ ನಾಯಕರೊಬ್ಬರು ಅಭಿಪ್ರಾಯ ಹಂಚಿಕೊಂಡರು.
ಈ ಕುರಿತಂತೆ ಯಾದವ ಸ್ಮೃತಿ ಬಳಿ ಎಬಿವಿಪಿ ಮುಖಂಡರ ಅಭಿಪ್ರಾಯ ಕೇಳಿದಾಗ ‘ಇಲ್ಲಿರೋದು ಬಿಜೆಪಿ ಸರ್ಕಾರ ಅಲ್ವಲ್ಲಾ? ಎಂದಿದ್ದಾರೆ. ‘ಸಿಎಂ ಜನತಾ ಪರಿವಾರದವರು, ಆರೋಗ ಸಚಿವರು ಕಾಂಗ್ರೆಸ್‌ನವರು’ ಎಂದ ಅವರು, ಸುಧಾಕರ್ ಅವರು ತಮ್ಮ ಮುಸ್ಲಿಂ ಸ್ನೇಹಿತರನ್ನು ಏಜೆಂಟರಾಗಿ ಇಟ್ಕೊಂಡಿದ್ದಾರೆ. ಅವರು ಬಿಜೆಪಿ ಶಾಸಕರಂತಿಲ್ಲ ಎಂದು ಆಮಾಧಾನ ಹೊರಹಾಕಿದ ವೈಖರಿ ಅಚ್ಚರಿಗೆ ಕಾರಣವಾಗಿದೆ.
ಬಿಜೆಪಿ ಮುಖಂಡರೂ ಕೂಡಾ ಅದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರವೀಣ್ ನೆಟ್ಟಾರು, ಹರ್ಷಾ ಮೊದಲಾದ ಕಾರ್ಯಕರ್ತರನ್ನು ಕಳೆದುಕೊಂಡಷ್ಟೇ ದುಃಖ ತುಮಕೂರು ಘಟನೆ ಬಗ್ಗೆಯೂ ಆಗುತ್ತಿದೆ ಎಂದಿದ್ದಾರೆ. ‘ಸಚಿವರು ಸರಿ ಇದ್ದರೆ ತಾನೆ ಇಲಾಖೆ ಸರಿ ಇರೋದು?’ ಎಂಬುದು ಅವರ ಮಾರ್ಮಿಕ ಪ್ರಶ್ನೆಯಾಗಿದೆ. ದೀಪಾವಳಿ ವೇಳೆ ಗಿಫ್ಟ್ ಕೊಟ್ಟು ಪತ್ರಕರ್ತರನ್ನೇ ಖರೀದಿಸಲು ಪ್ರಯತ್ನಿಸಿದಾಗಲೇ ಅವರ ಬಗ್ಗೆ ಗೊತ್ತಾಗಿಲ್ಲವೇ? ಅವರ ಬಗ್ಗೆ ಹೇಳಲು ಇನ್ನೇನು ಬಾಕಿ ಇದೆ ಎಂದು ಹಿರಿಯ ನಾಯಕರೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯವು ಈಗಿನ ಬೆಳವಣಿಗೆಗಳ ಬಗೆಗಿನ ಮಾರ್ಮಿಕ ವ್ಯಾಖ್ಯಾನದಂತಿತ್ತು.
ಪ್ರತಿಪಕ್ಷಗಳ ಸವಾಲು..
ಈ ನಡುವೆ, ತುಮಕೂರು ಘಟನೆ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಧುರೀಣ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆಗೆ ಪಟ್ಟುಹಿಡಿದಿದ್ದಾರೆ. ಈ ಘಟನೆ ಕುರಿತಂತೆ ನ್ಯಾಯಾಂಗ ತನಿಖೆಗೂ ಅವರು ಆಗ್ರಹಿಸಿದ್ದಾರೆ.
ಈ ಮಧ್ಯೆ, ಈ ರಾಜ್ಯದ ವ್ಯವಸ್ಥೆಯು ತುಮಕೂರಿನಲ್ಲಿನ ಗರ್ಭಿಣಿ ಹಾಗೂ ಹಸುಗೂಸುಗಳ ಸಾವಿನ ಪ್ರಕರಣದ ನಂತರವಾದರೂ ಸರಿಯಾಗಬಹುದೇ ಎಂಬುದನ್ನು ಕಾದುನೋಡಬೇಕಿದೆ.
ಧನ್ಯವಾದಗಳು ಸರ್..🙏
ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಿ.ಬದುಕಿರುವ ಆ ಹೆಣ್ಣು ಮಗಳಿಗೆ ಉತ್ತಮ ಭವಿಷ್ಯ ಕಲ್ಪಿಸಲು ನೀವು ನೆರವಾಗಬೇಕು. https://t.co/mlyoI5fJ4M
— ಶಕುಂತಲ ನಟರಾಜ್ (ಮೋದಿ ಪರಿವಾರ) (@ShakunthalaHS) November 4, 2022
























































