ಕೋಸ್ಟಲ್ನವರಿಗೆ ಸುರತ್ಕಲ್ ಟೋಲ್ ಸವಾಲ್: ಒಂದು ವಾರದಿಂದ ಟೋಲ್ ವಿರೋಧಿ ಅಹೋರಾತ್ರಿ ಸತ್ಯಾಗ್ರಹ.. ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ ಕೆಪಿಸಿಸಿ ನಾಯಕ ಇನಾಯತ್ ಅಲಿ..
ಮಂಗಳೂರು: ಕರಾವಳಿಯಲ್ಲೀಗ ಟೋಲ್ ಸೌಂಡ್ ಆಡಳಿತಾರೂಢ ಬಿಜೆಪಿ ನಾಯಕರಿಗೆ ಸವಾಲು ಎಂಬಂತಾಗಿದೆ. ದಶಕದಿಂದೀಚೆಗೆ ಸಙಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರು ಟೋಲ್ ವಿಚಾರದಲ್ಲಿ ಸ್ಥಳೀಯರ ಪರವಾಗಿ ನಿಂತಿಲ್ಲವೇಕೆ ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ. ಇದಕ್ಕೆ ಎದಿರೇಟು ನೀಡಿರುವ ನಳಿನ್ ಕುಮಾರ್, ಈ ಹಿಂದೆ ಆಸ್ಜರ್ ಫರ್ನಾಂಡೀಸ್ ಅವರು ಕೇಂದ್ರ ಸಚಿವರಾಗಿದ್ದಾಗ ಕಾಂಗ್ರೆಸ್ ನಾಯಕರು ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ. ಈ ನಡುವೆ ಸುರತ್ಕಲ್ ಟೋಲ್ ವಿರುದ್ದದ ಹೋರಾಟ ಬಿರುಸುಗೊಂಡಿದೆ.
ಸುರತ್ಕಲ್ ಟೋಲ್ ರದ್ದುಗೊಳಿಸಲು ಆಗ್ರಹಿಸಿ ‘ಟೋಲ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಹಲವು ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ. ಆರನೇ ದಿನವಾದ ನಿನ್ನೆ ಕಾಂಗ್ರೆಸ್ ನಾಯಕರನೇಕರು ಬಾಗಿಯಾಗಿ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು.ಈ ಹೋರಾಟದಲ್ಲಿ ಭಾಗಿಯಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಕರಾವಳಿಯ ಬಿಜೆಪಿ ಶಾಸಕರು ಸಂಸದರ ಅಸಹಾಯಕತೆ ಬಗ್ಗೆ ಆಕ್ರೋಶ ಹೊರಹಾಕಿದರು.
“ಸರಕಾರ ಜನರನ್ನು ಲೂಟಿ ಮಾಡಲು ನಿರ್ಮಾಣ ಮಾಡಿರುವ ಇಲ್ಲಿನ ಟೋಲ್ ಗೇಟ್ ತೆರವುಗೊಳ್ಳುವವರೆಗೆ ರಾತ್ರಿ ಹಗಲು ಧರಣಿ ಕೂರಬೇಕಾದ ಅನಿವಾರ್ಯತೆಯಿದೆ. ಟೋಲ್ ವಿರೋಧಿ ಸಮಿತಿ ಕೈಗೊಂಡಿರುವ ಹೋರಾಟಕ್ಕೆ ನನ್ನ ಪೂರ್ಣ ಬೆಂಬಲವಿದ್ದು ಮುಂದಿನ ದಿನಗಳಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ” ಎಂದು ಸಾರಿದರು.
ಕೇರಳದ ಕೆಪಿಸಿಸಿ ಮುಖಂಡ ರೋಸಿ ಜಾನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಡಿವೈಎಫ್ ಐ ಮುಖಂಡ ಮುನೀರ್ ಕಾಟಿಪಳ್ಳ, ಬಿ.ಕೆ. ಇಮ್ತಿಯಾಜ್ ಮತ್ತಿತರರು ಉಪಸ್ಥಿತರಿದ್ದರು.



























































