ಬೆಂಗಳೂರು: ದೇಶಪ್ರೇಮಿ ಯುವಕರನ್ನು ತಯಾರಿಸುವ ಸಂಘದ ಗರಡಿಯಲ್ಲಿ ಹಿರಿಯ ಮಾರ್ಗದರ್ಶಕರಲ್ಲೊಬ್ಬರಾದ ಚಂದ್ರಶೇಖರ ಭಂಡಾರಿ ವಿಧಿವಶರಾಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಚಂದ್ರಶೇಖರ ಭಂಡಾರಿ ಅವರು, ಸುದೀರ್ಘ 62 ವರ್ಷಗಳ ಕಾಲ ಸಂಘಟನೆಯ ಪೂರ್ಣಾವಧಿ ಕಾರ್ಯಕರ್ತರಾಗಿ ಶ್ರಮಿಸಿದ್ದಾರೆ.
ಚಂದ್ರಶೇಖರ ಭಂಡಾರಿಯವರು ಕವಿ, ಲೇಖಕರಾಗಿ ಗಮನಸೆಳೆದಿದ್ದರು. ರಾಷ್ಟ್ರೀಯವಾದದ ವಿಚಾರಗಳನ್ನು ಲೇಖನಿ ಮೂಲಕ ಜನತೆಗೆ ಯಲುಪಿಸುತ್ತಿದ್ದ ಇವರ ಅನೇಕ ಕೃತಿಗಳು ಯುವಜನರಿಗೆ ಸ್ಫೂರ್ತಿಯಾಗಿವೆ. “ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು..” ಎಂಬ ದೇಶಭಕ್ತಿ ಗೀತೆಯ ಕತೃ ಚಂದ್ರಶೇಖರ ಭಂಡಾರಿ.
ಸಂಘದ ಕಾರ್ಯಕರ್ತರ ಸ್ಫೂರ್ತಿಯ ಸೆಳೆಯಂತಿದೆ ಈ ಹಾಡು. ಭಾರತವನ್ನು ದೇವತೆಯನ್ನಾಗಿ ಬಣ್ಣಿಸಿರುವ ಕವಿ, ಈ ಹಾಡಿನಲ್ಲಿ ‘ವಿವಿಧತೆಯಲ್ಲಿ ಏಕತೆಯ ದೇಶ ನಮ್ಮದು’ ಎಂಬುದನ್ನು ಸಾರಿದ್ದಾರೆ. ಸಾಮರಸ್ಯಕ್ಕೆ ಪರ್ಯಾಯ ಸೂತ್ರವೇ ಇಲ್ಲ ಎಂಬುದನ್ನು ಈ ಹಾಡಿನ ಪ್ರತೀ ಸಾಲುಗಳು ಸಾರಿವೆ.
ಸಂಘದ ಹಿರಿಯ ಪ್ರಚಾರ ಪ್ರಮುಖರಾಗಿದ್ದ ಚಂದ್ರಶೇಖರ ಭಂಡಾರಿಯವರು ತಮ್ಮ ಇಳಿ ವಯಸ್ಸಿನಲ್ಲೂ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.























































