ಬೆಂಗಳೂರು: ಆಕಾಶದೆತ್ತರಕ್ಕೆ ಹಾರುವುದಕ್ಕಿಂತಲೂ ವಿನೀತರಾಗಿರುವುದು ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುರೇಶ್ ಬಿ.ಎನ್ . ಅವರ ಆತ್ಮಕಥೆ ಆನ್ ಟು ದಿ ರಾಕೆಟ್‍ಶಿಪ್ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಸುರೇಶ್ ಅವರ ಜೀವನದ ಪಯಣವನ್ನು ತಿಳಿಸುವ ಕೃತಿ ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ತರುವಂತಿದೆ. ಸಾಧಿಸುವ ಸ್ಫೂರ್ತಿಯುಳ್ಳ, ಅತ್ಯಂತ ವಿನಯಶೀಲ ವ್ಯಕ್ತಿ ಸುರೇಶ್. ವಿನಯಶೀಲರಾಗಿ ಉಳಿಯುವುದು ಬಹಳ ಕಷ್ಟ. ಅದೇ ಒಂದು ಸಾಧನೆ. ಯಶಸ್ಸು ಸಾಧನೆಯೆಡೆಗಿನ ಪಯಣ. ಕರ್ನಾಟಕ ಮತ್ತು ದೇಶದ ಹೆಮ್ಮೆಯ ಪುತ್ರ ಸುರೇಶ್ ಎಂದರು. ಎಲ್ಲರೂ ಸುರೇಶ್ ಅವರ ಆತ್ಮಕಥೆಯನ್ನು ಓದಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇಸ್ರೋ ದೇವರ ಬಳಿ ಕೊಂಡೊಯ್ಯುವ ದೇವಸ್ಥಾನವಿದ್ದಂತೆ. ಇಸ್ರೋ ಅನೇಕ ಸ್ಯಾಟಲೈಟ್‍ಗಳನ್ನು ನೀಡಿದೆ. ದೇವರನ್ನು ತಲುಪಲು ಜ್ಞಾನ ಮತ್ತು ಧ್ಯಾನ ಅಗತ್ಯ. ಇಸ್ರೋದಲ್ಲಿ ಯಶಸ್ಸು ಸಾಧಿಸಲು ಇವೆರಡೂ ಬಹಳ ಮುಖ್ಯ. ವೈಜ್ಞಾನಿಕ ಜ್ಞಾನ ಮತ್ತು ಧ್ಯಾನ ಅಗತ್ಯ. ವಿಜ್ಞಾನಿಗಳನ್ನು ಕಂಡಾಗ ವ್ಯಕ್ತಿಯಲ್ಲಿ ಹುದುಗಿರುವ ಜ್ಞಾನದ ಭಂಡಾರವನ್ನೇ ಕಂಡಂತಾಗುವುದು. ದೇಶ ಹಾಗೂ ಸಮಾಜದ ಒಳಿತಿಗಾಗಿ ಜ್ಞಾನವನ್ನು ಉಪಯೋಗಿಸುವವರೇ ಅತ್ಯುತ್ತಮ ವ್ಯಕ್ತಿಗಳು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ನಿರ್ದಿಷ್ಟವಾಗಿ ಕೆಲವರ ಏಳಿಗೆಯನ್ನು ಗುರಿಯಾಗಿಸಿಕೊಂಡು ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಅದೇ ರೀತಿ ಸದ್ದಿಲ್ಲದೇ ಮುಂದಿನ ಪೀಳಿಗೆಗಾಗಿ, ಸಮಸ್ಯೆಗಳನ್ನು ಬಗೆಹರಿಸಲು ಅನೇಕ ವಿಜ್ಞಾನಿಗಳು ಶ್ರಮಿಸುತ್ತಾರೆ. ಇಸ್ರೋದಲ್ಲಿ ಪರಿಹಾರವೇ ಗುರಿ. ಅದೇ ಅದರ ಮೌಲ್ಯ ಕೂಡ. ಕೊಪ್ಪ ತಾಲ್ಲೂಕಿನ ಹೊಸಕೆರೆಯಲ್ಲಿ ಹುಟ್ಟಿದ ಸುರೇಶ್ ಅವರ ಜೀವನ ಅತ್ಯಂತ ಎತ್ತರಕ್ಕೇ ಏರಿ, ಇಡೀ ಪ್ರಪಂಚವೇ ಕಾಣುವಂತಾಗಿದೆ. ಎತ್ತರಕ್ಕೆ ಏರಿದಷ್ಟೂ, ನಮ್ಮ ಜೀವನ ಏಕಾಂಗಿಯಾಗುತ್ತದೆ. ಆದರೂ, ಎಲ್ಲರ ಬಗ್ಗೆ ಯೋಚಿಸುವ ಶಕ್ತಿಯನ್ನು ಸುರೇಶ್ ಅವರು ಕಳೆದುಕೊಂಡಿಲ್ಲ. ಭಾರತೀಯ ಜನರಿಗೆ ಸುರೇಶ್ ಅವರು ಕೊಡುಗೆ ನೀಡಿದ್ದಾರೆ. ಅವರ ಪುತ್ರ ಸುರೇಶ್ ಅವರನ್ನು ಮಣ್ಣಿನ ಮಗ ಎಂದು ಉಲ್ಲೇಖಿಸಿರುವುದು ಸೂಕ್ತವಾಗಿಯೇ ಇದೆ ಎಂದರು.
ಸಮಾರಂಭದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿ ರಂಗನ್, ಇಸ್ರೋ ಅಧ್ಯಕ್ಷ ಸೋಮನಾಥನ್, ನಿಟಕಪೂರ್ವ ಇಸ್ರೋ ಅಧ್ಯಕ್ಷರಾದ ರಾಧಾಕೃಷ್ಣನ್, ಕಿರಣ್ ಕುಮಾರ್, ಡಿ.ಜಿ ಎ.ಡಿ.ಎ, ಡಿ.ಆರ್.ಡಿ.ಒ ಡಾ: ಗಿರೀಶ್ ದೇವಗಲ್, ಡಾ: ಕೆ.ಎಸ್. ಶಿವಂ, ಸುನೀಲ್ ಸುರೇಶ್, ಡಾ; ಬಿ.ಎನ್.ಸುರೇಶ್ ಉಪಸ್ಥಿತರಿದ್ದರು.