ಬೆಂಗಳೂರು: ರಾಜ್ಯದಲ್ಲಿ ಹಾಲಿನ ದರ ಹೆಚ್ಚಳ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹಾಲಿನ ದರ ಹೆಚ್ಚಳದ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ದರ ಹೆಚ್ಚಳದ ಲಾಭಾಂಶದ ಹಣವನ್ನು ರೈತರಿಗೆ ನೀಡಬೇಕೆಂಬ ಒಲವನ್ನು ಮುಖ್ಯಮಂತ್ರಿಗಳು ಹೊಂದಿದ್ದಾರೆ. ಆದರೆ ದರ ಹೆಚ್ಚಳ ಮಾಡದಂತೆ ಗ್ರಾಹಕರು ಒತ್ತಡ ಹಾಕುತ್ತಿದ್ದಾರೆ. ದರ ಹೆಚ್ಚಳದ ಸಂಬಂಧ ಮುಖ್ಯಮಂತ್ರಿಗಳ ಗಮನದಲ್ಲಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ದರ ಹೆಚ್ಚಳದ ಬಗ್ಗೆ 15 ಹಾಲು ಒಕ್ಕೂಟಗಳಿಂದ ಮಾಹಿತಿ ನೀಡಲಾಗಿದ್ದು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ನಂದಿನಿ ಕ್ಷೀರಸಮೃದ್ಧಿ ಬ್ಯಾಂಕ್ ಸ್ಥಾಪನೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಕುರಿತು ಕೇಂದ್ರ ಸಚಿವರಾದ ನಿರ್ಮಲಾ ಸೀತರಾಮನ್ ಅವರ ಜೊತೆ ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದಾರೆ. ಆರ್ ಬಿಐಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿದೆ. ಆರ್ ಬಿಐ ಅನುಮತಿಗೆ ಕೆಲವು ತಿದ್ದುಪಡಿ ಅವಶ್ಯಕವಾಗಿದ್ದು ತಿದ್ದುಪಡಿ ಆದ ಬಳಿಕ ಜಾರಿಯಾಗಲಿದೆ. ಯಶಸ್ವಿನಿ ಜಾರಿಗೆ ಎಲ್ಲಾ ಕಾರ್ಯ ಮುಕ್ತಾಯವಾಗಿದ್ದು ನವೆಂಬರ್ 1ಕ್ಕೆ ಮುಖ್ಯಮಂತ್ರಿಗಳು ಜಾರಿ ಮಾಡಲಿದ್ದಾರೆ ಎಂದು ಹೇಳಿದರು.


























































