ಬೆಂಗಳೂರು: ಗೋಮಾಳ ಜಮೀನು ಜಾನುವಾರುಗಳಿಗೆ ಮೇಯಲು ಇರುವ ಜಮೀನಾಗಿರುತ್ತದೆ. ಗೋವುಗಳ ಮೇವಿಗಾಗಿ ಪ್ರತಿ ಗ್ರಾಮದಲ್ಲೂ ಗೋಮಾಳ ಮೀಸಲಿಡಬೇಕು ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಒತ್ತಾಯ ಮಾಡಿದರು.
ಇಂದು ವಿಧಾನಸೌಧ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನಬೆಟ್ಟ ಇತ್ಯಾದಿ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡುವ ಕುರಿತು ಒಂದು ನೀತಿಯನ್ನು ರೂಪಿಸಲು ರಚಿಸಲಾಗಿರುವ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ಮಾತನಾಡಿದರು.
ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(1)ರನ್ವಯ ಪ್ರತಿ 100 ಜಾನುವಾರುಗಳಿಗೆ 12 ಹೆಕ್ಟೇರ್ ಗಳಂತೆ ಪ್ರತಿಯೊಂದು ಗ್ರಾಮದಲ್ಲಿ ಜಾನುವಾರುಗಳಿಗೆ ಗೋಮಾಳಗಳನ್ನು ಪ್ರತ್ಯೇಕವಾಗಿ ಮೀಸಲಿಡಬೇಕು ಎಂದು ಪ್ರಭು ಚವ್ಹಾಣ್ ಹೇಳಿದರು.
ಜಾನುವಾರುಗಳು, ಆಡು, ಕುರಿ, ಹಸು, ಕರು, ಎಮ್ಮೆಗಳು ಪ್ರತಿನಿತ್ಯ ಮೇಯಲು ಗೋಮಾಳ ಜಮೀನುಗಳನ್ನು ಆಶ್ರಯಿಸಿವೆ. ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳನ್ನು ಮೇಯಿಸಲು ಹುಲ್ಲುಗಾವಲು ಇಲ್ಲದೇ ರೈತರು, ದನಗಾಹಿಗಳು ಪರದಾಡುವುದನ್ನು ತಪ್ಪಿಸಿ, ಜಾನುವಾರುಗಳ ಪೋಷಣೆಗೆ ಅವಕಾಶ ನೀಡಿದಂತಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಪ್ರಭು ಚವ್ಹಾಣ್ ಸಭೆಗೆ ತಿಳಿಸಿದರು.
ಗೋಮಾಳ ಒತ್ತುವರಿಯಿಂದಾಗಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುತ್ತಿದ್ದು, ಮೇವಿಗಾಗಿ ರೈತರು ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ. ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡದಂತೆ ಒತ್ತುವರಿದಾರರಿಗೆ ಕಡಿವಾಣ ಹಾಕಬೇಕು ಎಂದರು.
ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿ ಅವುಗಳ ಸಂತತಿ ಕುಂಠಿತವಾಗುವುದನ್ನು ತಡೆಗಟ್ಟಲು ಗ್ರಾಮೀಣ ಪ್ರದೇಶದ ಪ್ರತಿಯೊಂದು ಗ್ರಾಮಗಳ ಹೊರವಲಯದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಗೋಮಾಳಗಳನ್ನು ಮೀಸಲಿಡಬೇಕಾಗಿದೆ ಎಂದು ಪ್ರಭು ಚವ್ಹಾಣ್ ಪುನರುಚ್ಚಿಸಿದರು.
ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.