ಬೆಂಗಳೂರು: ಟಿಪ್ಪು ಸುಲ್ತಾನ್ ಸಾವಿರಾರು ಕೊಡವರನ್ನು ಬಲವಂತವಾಗಿ ಮತಾಂತರ ಮಾಡಿ ಅಮಾನುಷವಾಗಿ ಕೊಂದ ವ್ಯಕ್ತಿ ಎಂಬುದು ನಿಮಗೆ ತಿಳಿದಿದೆಯೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು, ಭಾರತ್ ಜೋಡೋ ಯಾತ್ರೆಗೆ ಬರುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಟಿಪ್ಪು ಒಬ್ಬ ಹಂತಕ ಎಂಬುದನ್ನು ಅರಿತ ಬಳಿಕ ರಾಹುಲ್ ಗಾಂಧಿಯವರು ಮೈಸೂರು ಹಾಗೂ ಕೊಡಗು ಜನತೆಯ ಕ್ಷಮೆ ಕೇಳಿ, ತಮ್ಮ ಪಾದಯಾತ್ರೆ ಮುಂದುವರೆಸಬೇಕಲ್ಲವೇ ಎಂದು ಕೇಳಿದರು.
ನಿಮ್ಮ ಪಕ್ಷದ ರಾಜ್ಯದ ಮುಖಂಡ ಪಿ.ಎಫ್.ಐ ಸಿದ್ದರಾಮಯ್ಯನವರು ತಮ್ಮ ಆಡಳಿತದ ಕಾಲಘಟ್ಟದಲ್ಲಿ 2015ರಲ್ಲಿ 1,600 ಸಮಾಜ ಘಾತುಕ ಶಕ್ತಿಗಳ ಮೇಲಿದ್ದ 175 ಕೇಸ್ಗಳನ್ನು ಹಿಂಪಡೆದು ರಾಜ್ಯದಲ್ಲಿ ಕೋಮುಗಲಭೆ, ಅರಾಜಕತೆಗೆ ಪುಷ್ಟಿ ನೀಡಿದ್ದು ನಿಮಗೆ ತಿಳಿದಿಲ್ಲವೇ? ಹಾಗಿದ್ದರೆ ಕಾಂಗ್ರೆಸ್ ಪಕ್ಷ ಎಂದರೆ ಸಮಾಜವಿದ್ರೋಹಿಗಳಿಗೆ ಬೆಂಬಲ ಕೊಡುವ ಪಕ್ಷ ಎಂದು ಬಹಿರಂಗವಾಗಿ ಒಪ್ಪಿಕೊಳ್ಳುತ್ತೀರಾ? ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಅಲ್ಪಸಂಖ್ಯಾತರ ಓಲೈಕೆಯ ಪರಮಾವಧಿಯಾಗಿ ಕೇಂದ್ರ ವಕ್ಫ್ ಬೋರ್ಡ್ ಕಾಯ್ದೆ 1995ನ್ನು ಜಾರಿಗೆ ತಂದು ಸಂವಿಧಾನದ ಜಾತ್ಯತೀತತೆಯ ವ್ಯಾಖ್ಯಾನವನ್ನು ಅದಲು-ಬದಲು ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಕಾಲ್ನಡಿಗೆ ಮಾಡುವ ಯಾವ ನೈತಿಕತೆ ಇದೆ? ದಲಿತರ ಮೇಲಾಗುತ್ತಿರುವ ಮತಾಂತರವೆಂಬ ಶೋಷಣೆಯನ್ನು ನಿಯಂತ್ರಿಸುವ ಕಾನೂನನ್ನು ಹಿಂಪಡೆಯುತ್ತೇವೆಂದು ಹೇಳುವ ಮೂಲಕ ದಲಿತರ ಶೋಷಣೆಯನ್ನು ಬೆಂಬಲಿಸುವ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜೊತೆಗಿನ ನಿಮ್ಮ ಕಾಲ್ನಡಿಗೆ ಏನನ್ನು ಸೂಚಿಸುತ್ತದೆ? ಎಂದು ಕೇಳಿದರು.
ಇದು ಹೊಸ ಕ್ಷೇತ್ರ ಹುಡುಕಾಟದ ಯಾತ್ರೆಯೇ?
ಚುನಾವಣೆ ಸೋಲಿನ ಭಯದಿಂದ ಅಮೇಥಿಯಿಂದ ವೈನಾಡಿಗೆ ಕಾಲ್ಕಿತ್ತ ನೀವು (ರಾಹುಲ್ಗಾಂಧಿ) ಮತ್ತೊಮ್ಮೆ ಸೋಲಿನ ಭಯದಿಂದ ಹೊಸದೊಂದು ಕ್ಷೇತ್ರವನ್ನು ಹುಡುಕಲು ಕಾಲ್ನಡಿಗೆ ಮಾಡುತ್ತಿರುವಿರಾ? ಸಮಾಜವಾದಿ ಮುಖವಾಡ ಹಾಕಿಕೊಂಡು ಲಂಚವಾಗಿ ಬಂದ 70 ಲಕ್ಷ ರೂ. ಮೌಲ್ಯದ ಹ್ಯೂಬ್ಲೆಟ್ ವಾಚ್ ಧರಿಸಿದ ಮಜಾವಾದಿ ಸಿದ್ದರಾಮಯ್ಯನವರ ಜೊತೆ ನಿಮ್ಮ ಕಾಲ್ನಡಿಗೆ ಕಾಂಗ್ರೆಸಿನ ಭ್ರಷ್ಟ ಕೂಪಕ್ಕೆ ಹಿಡಿದ ಕೈಗನ್ನಡಿಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಅಧಿಕಾರಕ್ಕೆ ಬಂದರೆ ಸಂವಿಧಾನದ ಪರಿಚ್ಛೇದ 370 ರ ರದ್ಧತಿಯನ್ನು ಪುನಃ ವಾಪಾಸ್ ತರುತ್ತೇವೆ ಎಂದು ಹೇಳುವ ನೀವು ಭಾರತವನ್ನು ಒಡೆಯಲಷ್ಟೇ ಸಾಧ್ಯ ಅಲ್ಲವೇ? 1947ರ ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶ ವಿಭಜನೆ ಮಾಡಿದ ಕಾಂಗ್ರೆಸ್ ಪಕ್ಷ ಇಂದು ತನ್ನ ಪಾಪ ತೊಳೆದುಕೊಳ್ಳಲು ಕನ್ಯಾಕುಮಾರಿಯಿಂದ ಶ್ರೀನಗರದವರೆಗೂ ಪಾದಯಾತ್ರೆ ಮಾಡುತ್ತಿರುವಿರಾ? ಎಂದು ಅವರು ಪ್ರಶ್ನೆಗಳನ್ನು ಮುಂದಿಟ್ಟರು.
ನೆಹರೂ ಕುಟುಂಬದ ಹೆಸರಿನಲ್ಲಿ ಕರ್ನಾಟಕದ ಭ್ರಷ್ಟ ಕಾಂಗ್ರೆಸ್ ನಾಯಕರು ಮೂರು ತಲೆಮಾರು ಆಗುವಷ್ಟು ಆಸ್ತಿ ಮಾಡಿದ್ದಾರೆಂದು ನಿಮ್ಮ ಪಕ್ಷದ ನಾಯಕ ರಮೇಶ್ ಕುಮಾರ್ ಹೇಳಿದ್ದಾರೆ. ಈಗ ನಿಮ್ಮ 150 ದಿನದ ಕಾಲ್ನಡಿಗೆಯ ವೆಚ್ಚವನ್ನು ಈ ಲೂಟಿ ಹಣದಿಂದಲೇ ಮಾಡಲು ಹೊರಟಿದ್ದೀರಾ? ತಿಹಾರ್ ಜೈಲಿನಿಂದ ಬಂದ ನಿಮ್ಮ ಪಕ್ಷದ ರಾಜ್ಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮೇಕೆದಾಟು ಪಾದಯಾತ್ರೆ ಎಂಬ ಡ್ರಾಮಾ ಸೀನಿಯರ್ಸ್ ಕಾರ್ಯಕ್ರಮವು ಕನ್ನಡಿಗರನ್ನು ವಾರಗಟ್ಟಲೇ ರಂಜಿಸಿತ್ತು. ಈಗ ನಿಮ್ಮ ಕಾಲ್ನಡಿಗೆ ಎಂಬ ಪ್ಯಾನ್ ಇಂಡಿಯಾ ಡ್ರಾಮಾ ಸೀನಿಯರ್ಸ್ ಕಾರ್ಯಕ್ರಮ 150 ದಿನಗಳ ಕಾಲ ದೇಶದ ಜನರನ್ನು ರಂಜಿಸುವ ಉದ್ದೇಶವನ್ನು ಹೊಂದಿದೆಯೇ? ಎಂದರು.
ನ್ಯಾಷನಲ್ ಹೆರಾಲ್ಡ್ ಕೇಸ್ನಲ್ಲಿ ಜಾಮೀನಿನ ಮೇಲೆ ಹೊರಗಿರುವ ನೀವು (ರಾಹುಲ್ ಗಾಂಧಿ) ಹಾಗೂ ಸೋನಿಯಾ ಗಾಂಧಿಯವರು ಸುಮಾರು 5 ಸಾವಿರ ಕೋಟಿ ಹಣ ಲೂಟಿ ಮಾಡಿರುವ ವಿಚಾರ ಜನತೆಗೆ ತಿಳಿದಿದೆ. ನೀವು ಯಾವ ನೈತಿಕತೆಯ ಮೇಲೆ ಕಾಲ್ನಡಿಗೆ ಮಾಡುತ್ತಿರುವಿರಿ? ಭಾರತದಾದ್ಯಂತ ಕಾಂಗ್ರೆಸ್ ಪಕ್ಷ ಮನೆಯೊಂದು 40 ಬಾಗಿಲುಗಳಾಗಿದೆ. ಮೊದಲು ನಿಮ್ಮ ಪಕ್ಷವನ್ನು ಜೋಡಿಸುವ ಪಾದಯಾತ್ರೆ ಮಾಡುವುದು ಒಳಿತಲ್ಲವೇ? ಎಂದು ಕೇಳಿದ್ದಾರೆ.
ಆಧಾರ ರಹಿತ ಪೋಸ್ಟರ್ ಅಂಟಿಸಲು ಇ.ಡಿ ಕಛೇರಿಯಿಂದ ಬರುವ ಡಿ.ಕೆ. ಶಿವಕುಮಾರ್ರವರು ಯಾವಾಗ ಜೈಲು ಸೇರುತ್ತೇನೆಂಬ ಭಯದಲ್ಲಿಯೇ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರಲ್ಲವೇ? 5,846 ಕಿ.ಮೀ. ಉದ್ದದ ಸುವರ್ಣ ಚತುಷ್ಪದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಭಾರತದ ನಾಲ್ಕು ದಿಕ್ಕುಗಳನ್ನು ಜೋಡಿಸುವ ಕೆಲಸ ಮಾಡಿದ್ದು ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿಯವರು. ಈಗ ನೀವು ಅವರು ನಿರ್ಮಿಸಿರುವ ಹೆದ್ದಾರಿಯ ಮೂಲಕವೇ ನಿಮ್ಮ ನಾಟಕದ ಕಾಲ್ನಡಿಗೆ ಸಾಗಬೇಕಲ್ಲವೇ? ಎಂದು ನಳಿನ್ಕುಮಾರ್ ಕಟೀಲ್ ಅವರು ಪ್ರಶ್ನಾ ಸರಣಿಯನ್ನು ಮುಂದಿಟ್ಟಿದ್ದಾರೆ.





























































