ಬೆಂಗಳೂರು: ನಮ್ಮ ರಾಜ್ಯ ಬಸವಣ್ಣನ ನಾಡು. ಅವರು ನಮಗೆ ನುಡಿದಂತೆ ನಡೆಯಬೇಕು ಎಂಬ ಸಂದೇಶ ಸಾರಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರು ಬಸವಕಲ್ಯಾಣದಲ್ಲಿ, ನಾವು ನುಡಿದಂತೆ ನಡೆದಿದ್ದೇವೆ. ನೀವು ನುಡಿದಂತೆ ನಡೆಯುತ್ತಿದ್ದೀರಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ನಾಯಕರ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಕಳೆದ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ನಾನಿಂದು ನಿಮ್ಮ ಮುಂದೆ ಇಡುತ್ತಿದ್ದೇವೆ. ಆಮೂಲಕ ಬಿಜೆಪಿಯಿಂದ ವಚನ ವಂಚನೆಯಾಗಿದೆ ಎಂದು ಹೇಳುತ್ತಿದ್ದೇನೆ. ಯಡಿಯೂರಪ್ಪನವರು ತಮ್ಮ ಪ್ರಣಾಳಿಕೆಯಲ್ಲಿ ‘ಕರ್ನಾಟಕದ ಮುಂದೆ ನಮ್ಮ ವಚನ’ ಎಂದು ಹೇಳಿದ್ದರು. ಹಾಗಾಗಿ ಕಾಂಗ್ರೆಸ್ ಪಕ್ಷ ಇಂದಿನಿಂದ ಸರ್ಕಾರಕ್ಕೆ ಉತ್ತರ ಕೇಳುತ್ತಿದ್ದು, ಕಾಂಗ್ರೆಸ್ ನಾಯಕರೆಲ್ಲರೂ ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿಯವರು ಕೊಟ್ಟ ವಚನ ಉಳಿಸಿಕೊಂಡಿದ್ದಾರಾ ಎಂದು ಕೇಳುತ್ತಿದ್ದೇವೆ. ನಮ್ಮ ಈ ಪ್ರಶ್ನೆಗಳಿಗೆ ನಿಮ್ಮ ಹತ್ತಿರ ಇದೆಯಾ ಉತ್ತರ? ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.
ನೀವು ಬಂಡರು, ಸುಳ್ಳಿನ ಸರದಾರರು. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದನ್ನೇ ಸುಳ್ಳು ಮಾಡಬೇಕು ಎಂದು ಬಿಜೆಪಿಯ ಮಾಜಿ ಅಧ್ಯಕ್ಷ ಈಶ್ವರಪ್ಪ ಭಾಷಣವನ್ನೂ ಮಾಡಿದ್ದಾರೆ. ಹೀಗಾಗಿ ನೀವು ಆತ್ಮಸಾಕ್ಷಿಯ ಉತ್ತರ ನೀಡಬೇಕು ಎಂದ ಡಿಕೆಶಿ, ಬಿಜೆಪಿ ಸರ್ಕಾರ ಶೇ.90ರಷ್ಟು ಭರವಸೆಗಳಲ್ಲಿ ನುಡಿದಂತೆ ನಡೆಯಲು ಸಾಧ್ಯವಾಗಿಲ್ಲ. ಆಮೂಲಕ ಅವರು ವಚನ ಭ್ರಷ್ಟಚಾರಿಗಳಾಗಿದ್ದಾರೆ. ಇಲ್ಲಿ ವಚನ ವಂಚನೆಯಾಗಿದೆ ಎಂದು ಹೇಳಲು ನಾವಿಂದು ಕೂತಿದ್ದೇವೆ. ಇಂದಿನಿಂದ ನಮ್ಮ ಪಕ್ಷದ ನಾಯಕರೆಲ್ಲರೂ ನಿತ್ಯ ಒಂದೊಂದು ಪ್ರಶ್ನೆ ಕೇಳುತ್ತೇವೆ ಎಂದರು.
ನಿಮ್ಮ ರಾಷ್ಟ್ರೀಯ ನಾಯಕ ಪ್ರಧಾನಿ ಮೋದಿ ಅವರು ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು. ಆದರೆ ಇಂದು ರೈತ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರಿಗೆ ಸರಿಯಾದ ಬೆಂಬಲ ಬೆಲೆ ನೀಡಲಿಲ್ಲ, ಗೊಬ್ಬರ ಪೂರೈಸಲಾಗಲಿಲ್ಲ. ಜನ ಪ್ರತಿ ಲೀಟರ್ ನೀರಿಗೆ 25 ರೂ. ನೀಡುತ್ತಿರುವಾಗ, ಹಾಲು ಉತ್ಪಾದಿಸುವ ರೈತನಿಗೆ ಪ್ರತಿ ಲೀಟರ್ ಗೆ ಕೇವಲ 28 ರೂ ಮಾತ್ರ ಸಿಗುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಪಶುಸಂಗೋಪನೆ ಮೂಲಕ ಹಾಲು ಉತ್ಪಾದಿಸುವವನಿಗೆ 5 ರೂ. ಪ್ರೋತ್ಸಾಹ ಧನ ನೀಡಲಾಗಿತ್ತು. ಆ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿಲ್ಲ ಎಂದು ಟೀಕಿಸಿದ ಡಿಕೆಶಿ, ಬಿಜೆಪಿ ಸರ್ಕಾರ ಎಲ್ಲ ಪದಾರ್ಥಗಳ ಬೆಲೆ ಏರಿಕೆ ಮಾಡಿತು. 400 ರೂ.ಇದ್ದ ಅಡುಗೆ ಅನಿಲದ ಬೆಲೆ 1000 ರೂ. ಆಗಿದೆ. ಅಡುಗೆ ಎಣ್ಣೆ ಸೇರಿದಂತೆ ಎಲ್ಲ ಬೆಲೆ ಹೆಚ್ಚಿಸಲಾಗಿದೆ. ಆ ರೀತಿ ದಿನನಿತ್ಯ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಆದರೆ ಈ ಸರ್ಕಾರ ರೈತನಿಗೆ ಯಾವುದಾದರೂ ಸಹಾಯ ಮಾಡಿತೇ? ಈ ಸರ್ಕಾರ ಮಹಿಳೆಯರಿಗೆ ಸ್ತ್ರೀ ಉನ್ನತಿ ನಿಧಿ ಎಂಬ ಭರವಸೆ ನೀಡಿತ್ತು. ಯಾವ ಹೆಣ್ಣುಮಗಳಿಗೆ ಸಾಮಾಜಿಕ, ಶೈಕ್ಷಣಿಕವಾಗಿ ಅನುಕೂಲವಾಗುವಂತೆ ಯಾವ ಕೊಡುಗೆ ನೀಡಿದ್ದೀರಿ ಎಂದರು.
ಯುವಕರಿಗಾಗಿ ಹೊಸ ಉದ್ಯೋಗ ಸೃಷ್ಟಿಸವುದಾಗಿ ಹೇಳಿದ್ದರು, ಎಷ್ಟು ಉದ್ಯೋಗ ಸೃಷ್ಟಿಸಿದ್ದೀರಿ? ಹೊಸ ಪಿಯು ಕಾಲೇಜು ಸ್ಥಾಪಿಸುವುದಾಗಿ ತಿಳಿಸಿದ್ದೀರಿ. ಎಷ್ಟು ಸ್ಥಾಪಿಸಿದ್ದೀರಿ? ನಾವು ಈ ಎಲ್ಲ ಆರೋಪವನ್ನು ನಿಮ್ಮ ಪ್ರಣಾಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಆರೋಪ ಮಾಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಪರಶಿಷ್ಟ ಜಾತಿ ಹಾಗೂ ಪಂಗಡಕ್ಕಾಗಿ ಬೆಳಗಾವಿ ಅಧಿವೇಶನದಲ್ಲಿ ಐತಿಹಾಸಿಕ ಕಾಯ್ದೆ ಜಾರಿಗೆ ತಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಡಗದವರಿಗೆ ಜನಸಂಖ್ಯೆ ಅನುಗುಣನಾಗಿ ಅನುದಾನ ನೀಡುವಂತೆ ಮಾಡಿತ್ತು. ಇದು ನಮ್ಮ ಸಿದ್ಧಾಂತ ಹಾಗೂ ಬದ್ಧತೆ. ಆದರೆ ನೀವು ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ 4,500 ಕೋಟಿ ನೀಡುವುದಾಗಿ ವಚನ ನೀಡಿದ್ದಿರಿ, ಅದು ಸಾಧ್ಯವಾಗಿದೆಯೇ? ಕನ್ನಡ ನಾಡಿನ ನುಡಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಿರಿ. ಆದ್ಯತೆ ನೀಡಿದ್ದೀರಾ? ಎಂದು ಪ್ರಶ್ನಿಸಿದ ಅವರು, ನೀವು ವಚನ ವಂಚನೆ ಮಾಡಿದ್ದು, ನಿಮ್ಮ ಪ್ರಣಾಳಿಕೆ ವಂಚನೆಗಳ ಸರಮಾಲೆ. ನೀವು ಜನರ ಮತ ಪಡೆದು ಭ್ರಷ್ಟ ಸರ್ಕಾರ ನಡೆಸಿದ್ದೀರಿ. ಭ್ರಷ್ಟಾಚಾರದಲ್ಲಿ ಕರ್ನಾಟಕ ರಾಷ್ಟ್ರ ರಾಜಧಾನಿಯನ್ನಾಗಿ ಮಾಡಿದ್ದೀರಿ. ಇಂದು ಕಾಂಗ್ರೆಸ್ ನ ಎಲ್ಲ ನಾಯಕರು ಈ ಎಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದು, ನಿಮ್ಮ ಹತ್ತಿರ ಇದೆಯಾ ಉತ್ತರ? ಎಂದು ಬಿಜೆಪಿ ನಾಯಕರನ್ನು ತರಾಟಗೆ ತೆಗೆದುಕೊಂಡರು.






















































