ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಟೂರಿಸಂ ಸರ್ಕೀಟ್ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಮೈಸೂರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಬಿಂಬಿಸಲು ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ಹಾಗೂ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಮಾನಸ ಗಂಗೋತ್ರಿಯಲ್ಲಿ ಆಯೋಜಿಸಿರುವ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ “ಯುವಜನ ಮಹೋತ್ಸವ ”ದ ಉದ್ಘಾಟನೆ ಹಾಗೂ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಕಾಲೇಜು ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಮೈಸೂರಿನಲ್ಲಿ ಪ್ರವಾಸೋದ್ಯಮ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಮೈಸೂರಿನಲ್ಲಿ ವಿಮಾನ ನಿಲ್ದಾಣ ವಿಸ್ತರಣೆ, ಆಸ್ಪತ್ರೆಗಳ ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮೈಸೂರಿನ ಮಹರಾಜ ಕಾಲೇಜು ಹಾಗೂ ಮಹಾರಾಣಿ ಕಾಲೇಜುಗಳ ಸಮಗ್ರ ಅಭಿವೃದ್ಧಿ ಸರ್ಕಾರ ಬದ್ಧವಾಗಿದೆ. ರೇಷ್ಮೆ ಜವಳಿ ಪಾರ್ಕ್, ಲಾಜಿಸ್ಟಿಕ್ಸ್ ಪಾರ್ಕ್ ಮೈಸೂರಿನಲ್ಲಿ ಬರಲಿದೆ. ಮೈಸೂರು ಶೈಕ್ಷಣಿಕ ಕೇಂದ್ರವಾಗಿದ್ದು, 1000 ಕೊಠಡಿಗಳ ವಿದ್ಯಾರ್ಥಿ ಸಮುಚ್ಛಯವನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಯುವಶಕ್ತಿಯನ್ನು ಸದುಪಯೋಗ ಪಡಿಸಿಕೊಂಡು ಶ್ರೇಷ್ಠ ಭಾರತ ನಿರ್ಮಿಸಿ , ವಿಶ್ವದಲ್ಲಿಯೇ ನಂ.1 ದೇಶವಾಗಿಸಲು ಯುವಜನರ ಸಹಕಾರ ಅಗತ್ಯವಿದೆ. ತ್ಯಾಗ ಬಲಿದಾನ ಹೋರಾಟಗಳಿಂದ ಲಭಿಸಿದ ಸ್ವಾತಂತ್ರ್ಯಕ್ಕೆ 75 ವರ್ಷಗಳು ಸಂದಿವೆ. ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಕರ್ನಾಟಕದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಾಹುಕಾರ್ ಚೆನ್ನಯ್ಯ ಇಂತಹ ಅನೇಕ ಮಹನೀಯರ ತ್ಯಾಗಬಲಿದಾನಗಳಿಂದ ಸ್ವಾತಂತ್ರ್ಯ ದೊರೆತಿದೆ. ಸಹಸ್ರಾರು ಅನಾಮಧೇಯ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತೆತ್ತಿದ್ದು, ಅವರಿಗೆ ಸ್ವಾತಂತ್ರ್ಯ ಅಮೃತಮಹೋತ್ಸವವನ್ನು ಸಮರ್ಪಿಸಲಾಗಿದೆ. ಮೈಸೂರು ಸಂಸ್ಥಾನದ ರಾಜರ ಕಾಲದಲ್ಲಿ ರಾಜ್ಯ ಅಭಿವೃದ್ಧಿಯ ಪರ್ವವನ್ನು ಕಂಡಿತು. ರಾಷ್ಟ್ರನಿರ್ಮಾಣಕ್ಕಾಗಿ ಯುವಶಕ್ತಿ ಶ್ರಮಿಸಬೇಕಿದೆ ಎಂದರು.
ಪ್ರಧಾನಿ ಮೋದಿಯವರು ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ ಸಂಕಲ್ಪಿಸಿದ್ದಾರೆ. ದೇಶದಲ್ಲಿ ಆಹಾರ ಸ್ವಾವಲಂಬನೆಯನ್ನು ಸಾಧಿಸಲು ರೈತರು, ಗಡಿಯನ್ನು ಕಾಯುತ್ತಿರುವ ಯೋಧರು ಹಾಗೂ ದುಡಿಯುವ ವರ್ಗ ಶ್ರಮಿಸುತ್ತಿದೆ. ಸ್ವಾತಂತ್ರ್ಯೋತ್ಸವ 100 ವರ್ಷಗಳ ಅಮೃತ ಕಾಲದಲ್ಲಿ ನವಕರ್ನಾಟಕದಿಂದ ನವಭಾರತವನ್ನು ಕಟ್ಟುವ ಸಂಕಲ್ಪ ಮಾಡಬೇಕಿದೆ. ಭಾರತದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕೊಡುಗೆ ನೀಡಲು ಕರ್ನಾಟಕ ಒಂದೂವರೆ ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವುದು ಕರ್ನಾಟಕದ ಕನಸಾಗಿದೆ. ಎಂದು ತಿಳಿಸಿದರು.
ಭಾರತ ದೇಶ ನಮ್ಮದ್ದು, ಇದರ ಭವಿಷ್ಯ ನಮ್ಮ ಜವಾಬ್ದಾರಿ. ಯಶ್ ನವರು ಸಣ್ಣ ವಯಸ್ಸಿನಲ್ಲಿ ಮಹತ್ತರ ಸಾಧನೆಯನ್ನು ಮಾಡಿದ್ದು, ಯುವಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಮಹತ್ತರ ಸಾಧನೆ ಮಾಡಬೇಕೆಂದು ಕರೆ ನೀಡಿದರು.