ಮಂಡ್ಯ,: ಡಿಸೆಂಬರ್ ತಿಂಗಳಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸದ ಹಾಗೂ ವಿಳಂಬವಾಗಿರುವ ಕೆ.ಆರ್.ಎಸ್ ನ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಜನರು ಬರಲು ಯೋಜನೆ ರೂಪಿಸಿ ದೊಡ್ಡ ಪ್ರಾಮಾಣದಲ್ಲಿ ಕಾರ್ಯಕ್ರಮದ ಏರ್ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೌಶಲ್ಯಾಭಿವೃದ್ಧಿ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಅಭಿಯಾನ, ಸಂಜೀವಿನಿ- ಕೆ.ಎಸ್. ಆರ್.ಎಲ್.ಪಿ.ಎಸ್ ಸಂಸ್ಥೆ ಆಯೋಜಿಸಿದ್ದ ಮಂಡ್ಯ ವಿಶ್ವವಿದ್ಯಾಲಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಹಾಗೂ ಸಂಜೀವಿನಿ ಸಾಮಥ್ರ್ಯ, ಜೀವನೋಪಾಯ ವರ್ಷ 2022-23ನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ತನ್ನದೇ ವೈಶಿಷ್ಟ್ಯವನ್ನು ಹೊಂದಿದೆ. ಇಲ್ಲಿನ ರೈತರು ಶ್ರಮಜೀವಿಗಳು, ಸ್ವಾಭಿಮಾನಿಗಳು, ದೇಶಕ್ಕೆ ಅನ್ನ ನೀಡುವವರು. ಅವರ ಭಾವನೆಗಳಿಗೆ ಗೌರವ ನೀಡುವುದು ನಮ್ಮ ಕರ್ತವ್ಯ ಎಂದರು. ಮಂಡ್ಯದ ಸಮಗ್ರ ಅಭಿವೃದ್ಧಿಗೆ ಹಲವಾರು ಸಂಸ್ಥೆಗಳು ಹಾಗೂ ಯೋಜನೆಗಳನ್ನು ರೂಪಿಸಿದೆ. ವಿಸಿ ನಾಲೆ ಅಭಿವೃದ್ಧಿ ಮಾಡಿದವರು ನಾಗೇಡೌಡರು. ನಂತರ 504 ಕೋಟಿ ರೂ.ಗಳ ವೆಚ್ಚದಲ್ಲಿ ಬ್ರಾಂಚ್ ಕಾಲುವೆ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಈ ಭಾಗದ ಹೆಬ್ಬಕವಾಡಿ, ಸೂಳೇ ಕೆರೆ ಹಾಗೂ ಮದ್ದೂರು ಬ್ರಾಂಚ್ ಕಾಲುವೆಗಳ ಸಮಗ್ರ ಅಭಿವೃದ್ಧಿ ಮಾಡಲು ಈ ವರ್ಷ 500 ಕೋಟಿ ರೂ.ಗಳನ್ನು ಒದಗಿಸಿ, ನೀರಾವರಿ ರೈತನ ಹೊಲಕ್ಕೆ ತಲುಪುವ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಲಾಗುವುದು ಎಂದರು.
ಶೀಘ್ರದಲ್ಲಿಯೇ ಮೈಶುಗರ್ ಪ್ರಾರಂಭೋತ್ಸವ
ಮೈಶುಗರ್ ಸಕ್ಕರೆ ಕಾರ್ಖಾನೆ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಮುಚ್ಚಿ ಹಲವಾರು ವರ್ಷಗಳಾಗಿತ್ತು. ಇದನ್ನು ಸರ್ಕಾರವೇ ನಡೆಸಬೇಕೋ ಅಥವಾ ಖಾಸಗಿಯವರಿಗೆ ವಹಿಸಬೇಕೋ ಎನ್ನುವ ಜಿಜ್ಞಾಸೆ ಇತ್ತು. ಇಲ್ಲಿನ ಪರಿಸ್ಥಿತಿ ಅವಲೋಕಿಸಿ, ಧರಣಿ ಕುಳಿತ ರೈತ ಸಂಘದವರೊಂದಿಗೆ ಮಾತನಾಡಿ, ರೈತರ ಅಹವಾಲುಗಳನ್ನು ಕೇಳಿದ್ದೆ. ಇಷ್ಟು ದೊಡ್ಡ ಕಾರ್ಖಾನೆ, ರೈತರಿಗೆ ಅನ್ನವನ್ನು ಕೊಡುವ ಕಾರ್ಖಾನೆಯನ್ನು ಮುಚ್ಚುವುದು ಪಾಪದ ಕೆಲಸವೆಂದು ಭಾವಿಸಿದೆ. ಹಲವಾರು ನಾಯಕರು ಬಂದು ಹೋಗಿದ್ದರೂ, ಮಾತನಾಡಿದ್ದರೂ ಯಾರೂ ಏನೂ ಮಾಡಿರಲಿಲ್ಲ. ಆದರೆ ಈ ಭಾಗದ ಕಬ್ಬು ಬೆಳೆಗಾರರಿಗೆ ನ್ಯಾಯವನ್ನು ಕೊಡಿಸಲು ತೀರ್ಮಾನ ಮಾಡಿದ್ದರಿಂದ ಇಂದು ಮಂಡ್ಯ ಶುಗರ್ ಕಾರ್ಖಾನೆಯಲ್ಲಿ ಕೆಲಸವನ್ನು ಪ್ರಾರಂಭ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಖುದ್ದಾಗಿ ಬಂದು ಪ್ರಾರಂಭೋತ್ಸವವನ್ನು ಮಾಡುವುದಾಗಿ ತಿಳಿಸಿದರು.