ಬೆಂಗಳೂರು: ಮಣಿಪಾಲದ ಪೈ ಪರಿವಾರದ ಹಿರಿಯರು, ನಾಡಿನ ಹೆಸರಾಂತ ಪತ್ರಿಕೆ ಉದಯವಾಣಿ ಸಂಸ್ಥಾಪಕರು ಆಗಿದ್ದ *ಶ್ರೀ ಟಿ. ಮೋಹನದಾಸ್ ಪೈ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಅತ್ಯುತ್ತಮ ಆಡಳಿತ, ಕ್ರಮಬದ್ದ ಯೋಜನೆಗಳನ್ನು ರೂಪಿಸುವಲ್ಲಿ ನಿಪುಣರಾಗಿದ್ದ ಪೈ ಅವರು, ಪೈ ಪರಿವಾರದ ಕೀರ್ತಿಯನ್ನು ದಿಗಂತಕ್ಕೆ ಏರಿಸಿ, ಅಸಂಖ್ಯಾತ ಜನರಿಗೆ ಉದ್ಯೋಗದಾತರು ಆಗಿದ್ದರು.1970ರಲ್ಲಿ ಉದಯವಾಣಿ ಪತ್ರಿಕೆಯನ್ನು ಆರಂಭಿಸಿದ ಮೋಹನದಾಸ ಪೈ ಅವರು, ಅಲ್ಪ ಕಾಲದಲ್ಲಿಯೇ ಅದನ್ನು ರಾಜ್ಯದ ಪ್ರಮುಖ ಪತ್ರಿಕೆಯನ್ನಾಗಿ ಕಟ್ಟಿದರು. ಮುದ್ರಣ, ಪ್ರಕಾಶನ, ಮುದ್ರಣ ತಂತ್ರಜ್ಞಾನದಲ್ಲಿ ನವಶಕೆ ಆರಂಭಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.
ಮೋಹನದಾಸ ಪೈ ಅವರ ಅಗಲಿಕೆ ವೈಯಕ್ತಿಕವಾಗಿ ದುಃಖ ಉಂಟು ಮಾಡಿದೆ. ಅವರಿಗೆ ಭಗವಂತ ಚಿರಶಾಂತಿ ದಯಪಾಲಿಸಲಿ ಹಾಗೂ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಇಡೀ ಪೈ ಪರಿವಾರಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.




















































