ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಸಂದರ್ಭದಲ್ಲಿ ಸುಮಾರು 78 ಲಕ್ಷ ಸದಸ್ಯರ ನೋಂದಣಿ ಆಗಿದೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಕ್ರಿಯೆ ಕುರಿತು ಡಿಕೆಶಿ ಮಾಹಿತಿ ಹಂಚಿಕೊಂಡರು.
‘ಕೇಂದ್ರದ ಮಾಜಿ ಸಚಿವರಾದ ಸುದರ್ಶನ್ ನಾಚಿಯಪ್ಪನ್ ಅವರು ಪಕ್ಷದ ಚುನಾವಣಾಧಿಕಾರಿಯಾಗಿದ್ದಾರೆ. ಇನ್ನು ಕೇರಳದ ಜೋಸೆಫ್ ಅಬ್ರಾಹಂ ಹಾಗೂ ಛತ್ತೀಸ್ ಗಡದ ಮೋತಿಲಾಲ್ ದೇವಾನಂದ್ ಅವರು ಉಪ ಚುನಾವಣಾಧಿಕಾರಿಯಾಗಿ ರಾಜ್ಯಕ್ಕೆ ಬಂದಿದ್ದಾರೆ ಎಂದರು.
ಚುನಾವಣೆ ಪ್ರಕ್ರಿಯೆ ಭಾಗವಾಗಿ ನಮಗೆ ಪಕ್ಷದ ಚುನಾವಣೆ ಮತದಾರರ ಪಟ್ಟಿಯನ್ನು ಸಲ್ಲಿಸಲಾಗಿದೆ. ರಾಜ್ಯದಲ್ಲಿ ಒಟ್ಟು 78 ಲಕ್ಷ ಸದಸ್ಯರ ನೋಂದಣಿ ಆಗಿದೆ. ಮತ್ತೆ ಕೆಲವರು ಬುಕ್ ಮೂಲಕ ಸದಸ್ಯತ್ವ ಪಡೆದಿದ್ದು, ಅದನ್ನು ಮುಂದಿನ ದಿನಗಳಲ್ಲಿ ಸೇರಿಸಲಾಗುವುದು. ಆ ಮೂಲಕ ಇಡೀ ದೇಶದಲ್ಲೇ ನಾವು ಮೊದಲ ಸ್ಥಾನದಲ್ಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸದಸ್ಯತ್ವ ನೋಂದಣಿ ಮಾಡಿದ ನೋಂದಾಣಿದಾರ, ಮುಖ್ಯ ನೋಂದಾಣಿದಾರರು, ನಾಯಕರಿಗೆ ಶ್ರೀಮತಿ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅವರು ಅಭಿನಂದನೆ ತಿಳಿಸಿದ್ದಾರೆ. ನಾನು ಕೂಡ ಸದಸ್ಯರಾಗಿರುವ ಎಲ್ಲರನ್ನೂ ಅಭಿನಂದಿಸುತ್ತೇನೆ. ನೋಂದಾಣಿದಾರರು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸದಸ್ಯತ್ವ ನೋಂದಣಿ ಶುಲ್ಕ 5, ಗುರುತಿನ ಚೀಟಿ ಸ್ಮಾರ್ಟ್ ಕಾರ್ಡ್ ಬೇಕಾದರೆ 10 ರೂ. ಶುಲ್ಕವನ್ನು ಕೆಪಿಸಿಸಿ ಕಚೇರಿಗೆ ರವಾನಿಸಬೇಕು. ನಂತರ ಸಂಬಂಧಿಸಿದ ಬ್ಲಾಕ್ ಮಟ್ಟದ ಪಟ್ಟಿಯನ್ನು ಪ್ರಕಟಿಸುತ್ತೇವೆ ಎಂದರು.
ನಂತರ ಸದಸ್ಯತ್ವ ಪಡೆದ ಮತದಾರರ ಪಟ್ಟಿಯನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಾಕಲಾಗುವುದು. ಬೂತ್ ಮಟ್ಟದಲ್ಲಿ ನಾಯಕರುಗಳಿಗೆ ವಾಟ್ಸಾಪ್, ಫೇಸ್ಬುಕ್ ಮೂಲಕ ರವಾನಿಸಲಾಗುವುದು. ಇನ್ನು ಸದಸ್ಯತ್ವದ ವಿಚಾರವಾಗಿ ದೂರು ಅಥವಾ ಅಹವಾಲುಗಳಿದ್ದರೆ ಅದನ್ನು ಸಲ್ಲಿಸಲು 15 ದಿನ ಕಾಲಾವಕಾಶ ನೀಡುತ್ತೇವೆ. ನಂತರ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಮಾಡಿ ಈ ಅಹವಾಲು ಸ್ವೀಕರಿಸುತ್ತೇವೆ. ನಂತರ ಅಂತಿಮ ಪಟ್ಟಿ ಪ್ರಕಟ ಮಾಡಲಾಗುವುದು ಎಂದವರು ವಿವರಿಸಿದರು.
ಬೂತ್ ಮಟ್ಟದ ಸಮಿತಿ ರಚನೆಯಾಗುತ್ತದೆ. ನಂತರ ಬ್ಲಾಕ್ ಪ್ರತಿನಿಧಿಗಳಾಗಿ ಪದಾಧಿಕಾರಿಗಳಾಗಲು ಅರ್ಹರಾಗುತ್ತಾರೆ. ಆನಂತರ ಎಲ್ಲೆಲ್ಲಿ ನೂತನ ಬ್ಲಾಕ್ ಅಧ್ಯಕ್ಷರ ನೇಮಕ ಮಾಡಬೇಕೋ ಅಲ್ಲಿ ಮೇ 29 ರಿಂದ ಜೂ.10 ರ ಒಳಗೆ ಚುನಾವಣೆ ಮಾಡಲಾಗುವುದು. ಈ ಚುನಾವಣೆ ಸಮಯದಲ್ಲಿ ಪ್ರತಿ ಬ್ಲಾಕ್ ನಲ್ಲೂ ಚುನಾವಣೆ ಮೇಲ್ವಿಚಾರಣಾ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಡಿಕೆಶಿ ತಿಳಿಸಿದರು.
ಜಿಲ್ಲಾ ಮಟ್ಟದ ಚುನಾವಣೆ ಸಂದರ್ಭದಲ್ಲಿ ಹೊರ ರಾಜ್ಯಗಳಿಂದ ಚುನಾವಣಾ ಅಧಿಕಾರಿಗಳು ಬರಲಿದ್ದಾರೆ. ಬ್ಲಾಕ್ ಮಟ್ಟದ ಚುನಾವಣೆಗೆ ಬೇರೆ ಕ್ಷೇತ್ರಗಳಿಂದ ಚುನಾವಣಾಧಿಕಾರಿಗಳನ್ನು ನೇಮಿಸಲಾಗುತ್ತದೆ. ಮುಕ್ತ ಚುನಾವಣೆ ಮಾಡಲಾಗುವುದು ಎಂದ ಅವರು, ನಂತರ ಜಿಲ್ಲಾ ಕಾಂಗ್ರೆಸ್ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ನಂತರ ಎಐಸಿಸಿ ಚುನಾವಣೆ ನಡೆಯಲಿದೆ. ಈ ಮೂಲಕವಾಗಿ ಕೇಡರ್ ಬೇಸ್ ಪಕ್ಷ ಮಾಡಲು, ಬೂತ್ ಮಟ್ಟದ ನಾಯಕರನ್ನು ಆಯ್ಕೆ ಮಾಡಲಿದ್ದು, ಇವರನ್ನು ಪ್ರಜಾಪ್ರತಿನಿಧಿ ಎಂದು ಕರೆಯಲಾಗುವುದು ಎಂದರು.
ಬುಧವಾರ ಪಕ್ಷದ ಪದಾಧಿಕಾರಿಗಳ ಸಭೆ ಮಾಡಲಿದ್ದು, ಅವರಿಗೆ ಇದೆಲ್ಲದರ ಮೇಲುಸ್ತುವಾರಿ ಜವಾಬ್ದಾರಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮತ್ತಷ್ಟು ಪದಾಧಿಕಾರಿಗಳು ನೇಮಕವಾಗಲಿದ್ದು, ಅವರಿಗೂ ಜವಾಬ್ದಾರಿ ಹಂಚಲಾಗುವುದು.
ಮುಂದೆ ಅಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯಲಿದ್ದು, ನಾನು ಮತ್ತೆ ಚುನಾವಣೆಗೆ ಸ್ಪರ್ಧಿಸಬೇಕಾಗುತ್ತದೆ. ಪಕ್ಷದ ಸದಸ್ಯರಾಗಿ, ಬ್ಲಾಕ್ ಮಟ್ಟದಲ್ಲಿ ಸ್ಪರ್ಧೆ ಮಾಡಿದ್ದವರು ಮಾತ್ರ ಈ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ಸದಸ್ಯರಾಗದೇ, ತಮ್ಮ ಬೂತ್ ಪ್ರತಿನಿಧಿಸದಿದ್ದರೆ ಸ್ಪರ್ಧಿಸಲು ಸಾಧ್ಯವಿಲ್ಲ. ನಾನು ಹಾಗೂ ನನ್ನ ತಮ್ಮ ಒಂದೇ ಬೂತ್ ನವರಾಗಿದ್ದು, ನಮ್ಮಿಬ್ಬರಲ್ಲಿ ಒಬ್ಬರು ಅಲ್ಲಿಂದ ಪ್ರತಿನಿಧಿಸಬಹುದು. ಮತ್ತೊಬ್ಬರು ಬೇರೆ ಬೂತ್ ನಿಂದ ಪ್ರತಿನಿಧಿಸಬಹುದು. ಈ ಚುನಾವಣೆ ನಡೆಸಲು ಹೊರ ರಾಜ್ಯಗಳಿಂದ ಒಟ್ಟು 40 ಸದಸ್ಯರ ತಂಡ ಆಗಮಿಸಿದೆ. ಇನ್ನು ಪಕ್ಷದ ಹಿತದೃಷ್ಟಿಯಿಂದ ಮೇ 1 ರಿಂದ ಪಕ್ಷದ ಸದಸ್ಯತ್ವ ಮುಂದುವರಿಯಲಿದ್ದು, ಈಗ ಸದಸ್ಯರಾಗುವವರಿಗೆ ಪಕ್ಷದ ಆಂತರಿಕ ಚುನಾವಣೆಯಲ್ಲಿ ಮತದಾನ ಹಕ್ಕು ಇರುವುದಿಲ್ಲ ಎಂದು ಮಾಹಿತಿ ನೀಡಿದರು.