ದೊಡ್ಡಬಳ್ಳಾಪುರ: ಜೆಡಿಎಸ್ ವರಿಷ್ಠರು ತಮ್ಮನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದರೆ ನಾಳೆಯಿಂದಲೇ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ತಳಮಟ್ಟದಿಂದ ಪಕ್ಷ ಸಂಘಟಿಸಿ ಗೆಲುವು ಸಾಧಿಸುತ್ತೇನೆ ಎಂದು ಜೆಡಿಎಸ್ ಮುಖಂಡ ರಮೇಶ್ ಗೌಡ ಹೇಳಿದ್ದಾರೆ.
ದೊಡ್ಡಬಳ್ಳಾಪುರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಎಲ್ಲ ಮುಖಂಡರೊಟ್ಟಿಗೆ ಸಂಪರ್ಕದಲ್ಲಿದ್ದೇನೆ. ವಿಧಾನ ಪರಿಷತ್ ಚುನಾವಣೆ ವೇಳೆ ಅತಿ ಹೆಚ್ಚು ಮತ ಇಲ್ಲಿಂದಲೇ ಬಂದಿವೆ. ಜನರ ನಾಡಿ ಮಿಡಿತ ಅರಿತಿದ್ದೇನೆ. ಹಾಗಾಗಿ ನಾನು ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಅವರು ಕ್ಷೇತ್ರದಲ್ಲಿ ಮೂರು ಬಾರಿ ಸ್ಪರ್ಧಿಸಿ ಸೋತಿದ್ದಾರೆ. ಸ್ಥಳೀಯ ಮುಖಂಡರ ಗೊಂದಲ ಹಾಗೂ ಅಸಹಕಾರದಿಂದ ಪಕ್ಷಕ್ಕೆ ಸೋಲಾಗಿದೆ ಎಂದರು.
ದೊಡ್ಡಬಳ್ಳಾಪುರ ಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ. ನನಗೆ ಟಿಕೆಟ್ ಕೊಡುವ ಭರವಸೆ ನೀಡಿದರೆ ವಾರಕ್ಕೆ ನಾಲ್ಕು ದಿನ ಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಿ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷದ ಅಣತಿಯಂತೆ ನಡೆದು ಪಕ್ಷದ ವಹಿಸುವ ಜವಾಬ್ದಾರಿ ನಿಭಾಯಿಸುವೆ. ಈಗಾಗಲೇ ಪಕ್ಷ ಸೂಚಿಸಿದ ಕೆಲಸ ನಿಷ್ಠೆಯಿಂದ ಮಾಡಿರುವೆ, ಆದ್ದರಿಂದ ಕ್ಷೇತ್ರ ಗೆಲ್ಲುವ ಮಾನದಂಡ ಇರುವವರಿಗೆ ಟಿಕೆಟ್ ನೀಡಬೇಕು ಎಂದರು. ವಿಧಾನ ಪರಿಷತ್ ಚುನಾವಣೆ ವೇಳೆ ಕೆಲ ಖಾಸಗಿ ವಾಹಿನಿಗಳಲ್ಲದೇ ಕೆಲವರು ನನ್ನ ವಿರುದ್ಧ ಅಪಪ್ರಚಾರ ನಡೆಸಿದರು. ತೇಜೋವಧೆ ಮಾಡಿದವರ ವಿರುದ್ದ 25 ಕೋಟಿಗೆ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದರು.
ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ನಗರಸಭೆಯಲ್ಲಿ ಸ್ಥಾಯಿಸಮಿತಿ ಅಧ್ಯಕ್ಷ ಸ್ಥಾನ ಜೆಡಿಎಸ್ ಗೆ ನೀಡುವ ಕುರಿತು ಅಧಿಕಾರ ಹಂಚಿಕೆ ವೇಳೆ ಮಾತುಕತೆಯಾಗಿತ್ತು. ಆದರೆ, ಈವರೆಗೂ ಸ್ಥಾಯಿಸಮಿತಿಗೆ ಅಧ್ಯಕ್ಷರನ್ನು ಅಯ್ಕೆ ಮಾಡಲಿಲ್ಲ. ಈ ಕುರಿತು ಬಿಜೆಪಿ ನಾಯಕರ ಜತೆ ಮಾತನಾಡಲಾಗುವುದು ಎಂದರು.
ಜೆಡಿಎಸ್ ಮುಖಂಡರಾದ ಅಪ್ಪಯ್ಯಣ್ಣ, ನಗರಸಭೆ ಸದಸ್ಯರಾದ ತ.ನ.ಪ್ರಭು, ಮಲ್ಲೇಶ್, ಕುಂಟನಹಳ್ಳಿ ಮಂಜುನಾಥ್ ಮೊದಲಾದ ಮುಖಂಡರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.