ವಿದ್ಯುತ್ ಕಡಿತ ಮತ್ತು ಟ್ರಾನ್ಸ್ ಫಾರ್ಮ್ ಬದಲಾವಣೆಗೆ 5 ಸಾವಿರ ಲಂಚದ ಆರೋಪ.. ಬೆಸ್ಕಾಂ ಕಚೇರಿ ಮುಂದೆ ಕೆ.ಮಥಾಯಿ ನೇತೃತ್ವದಲ್ಲಿ ರೈತರ ಪ್ರತಿಭಟನೆ..
ಬೆಂಗಳೂರು : ಪದೇ ಪದೇ ವಿದ್ಯುತ್ ಕಡಿತ ಮತ್ತು ಟ್ರಾನ್ಸ್ ಫಾರ್ಮ್ ಬದಲಾವಣೆಗೆ 5 ಸಾವಿರ ಕೇಳುವ ಬೆಸ್ಕಾಂ ಅಧಿಕಾರಿಗಳ ವಿರುದ್ಧ ನಿವೃತ ಕೆಎಎಸ್ ಅಧಿಕಾರಿ ಕೆ. ಮಥಾಯಿ ನೇತೃತ್ವದಲ್ಲಿ ರೈತರು ದೊಡ್ಡಬಳ್ಳಾಪುರದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಳೆದೊಂದು ವಾರದಿಂದ ವಿದ್ಯುತ್ ಕಡಿತ ಪದೇ ಪದೇ ಆಗುತ್ತಿದೆ, 7 ಗಂಟೆ 3 ಫೇಸ್ ವಿದ್ಯುತ್ ಸರಬರಾಜಿಗೆ ಸರ್ಕಾರ ಆದೇಶ ನೀಡಿದೆ, ಆದರೆ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆ ಆಗುತ್ತಿಲ್ಲ, 3 ಫೇಸ್ ವಿದ್ಯುತ್ ಕೊಡುವಾಗ ಪದೇ ಪದೇ ವಿದ್ಯುತ್ ಕಡಿತ ಮಾಡುತ್ತಿದ್ದಾರೆ, ನಿರಂತರ ವಿದ್ಯುತ್ ಕಡಿತದಿಂದ ಬೆಳೆಗಳು ಒಣಗುತ್ತಿವೆ. ಇದರಿಂದ ಅಕ್ರೋಶಗೊಂಡ ರೈತರು ದೊಡ್ಡಬಳ್ಳಾಪುರ ನಗರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರೈತರ ಪ್ರತಿಭಟನೆಯಲ್ಲಿ ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯಿ ಭಾಗಿಯಾಗಿದ್ದರು. ಟ್ರಾನ್ಸ್ ಫಾರ್ಮ್ ಬದಲಾವಣೆಗೆ ಬೆಸ್ಕಾಂ ಅಧಿಕಾರಿಗಳು 5 ಸಾವಿರ ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು ಇದೇ ಸಮಯದಲ್ಲಿ ರೈತರು ಅಧಿಕಾರಿಗಳು ವಿರುದ್ಧ ತಮ್ಮ ಅಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಎಇಇ ರೋಹಿತ್ ವಿದ್ಯುತ್ ಪೂರೈಕೆ ಮತ್ತು ಬೇಡಿಕೆಯಲ್ಲಿ ವ್ಯತ್ಯಾಸ ಇರುವುದರಿಂದ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ, ಮುಂದೇ ಪದೇ ಪದೇ ವಿದ್ಯುತ್ ಕಡಿತ ಮಾಡದೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವ ಭರವಸೆ ನೀಡಿದರು.





















































