ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಪ್ರಸ್ತುತ ವಿಚಾರಗಳನ್ನು ರಾಜಕೀಯ ಲಾಭಕ್ಕಾಗಿ ಓಲೈಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಆರೋಪಿಸಿದ್ದಾರೆ. ಸಮಾಜದಲ್ಲಿ ಆಗುತ್ತಿರುವ ಈಗಿನ ಬೆಳವಣಿಗೆಗಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್‍ನ ಓಲೈಕೆ ರಾಜಕಾರಣಕ್ಕೆ ಜನರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ಜನರು ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿಚಾರದಲ್ಲಿ ತಮ್ಮದೇ ಆದ ನಿಲುವನ್ನು ತೆಗೆದುಕೊಂಡಿದ್ದಾರೆ ಬಿಜೆಪಿ ಈ ವಿಚಾರದಲ್ಲಿ ಯಾರನ್ನೂ ಬೆಂಬಲಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯ ಜಗದ್ವಂದ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್” ಚಿಂತನೆಯೊಂದಿಗೆ ಮುನ್ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಕಾಂಗ್ರೆಸ್ ಈಗಾಗಲೇ ದೇಶಾದ್ಯಂತ ಕಣ್ಮರೆಯಾಗುತ್ತಿದೆ. ಸುಳ್ಳಿನ ಸರದಾರರಾದ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ಶೀತಲ ಸಮರದಿಂದ ಕಾಂಗ್ರೆಸ್ ಪಕ್ಷ ನೆಲಕಚ್ಚಲಿದೆ. ಕುಟುಂಬ ರಾಜಕಾರಣವನ್ನೇ ನೆಚ್ಚಿಕೊಂಡಿರುವ ಹಾಗೂ ಕೆಲವೇ ಜಿಲ್ಲೆಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಜೆಡಿಎಸ್ ಕೂಡ ರಾಜ್ಯದಲ್ಲಿ ನಿರ್ನಾಮವಾಗಲಿದೆ. ಇದೇ ಆತಂಕದಿಂದ ಜೆಡಿಎಸ್ ನಾಯಕ ಎಚ್‍ಡಿ ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ಟೀಕೆಯನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಎಚ್‍ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಹಿಜಾಬ್, ಹಲಾಲ್ ಕಟ್, ಮಸೀದಿಯ ಮೇಲಿನ ಧ್ವನಿವರ್ಧಕ ಕುರಿತಂತೆ ಸ್ಪಷ್ಟ ನಿಲುವನ್ನೇ ಹೊಂದಿಲ್ಲ ಕೇವಲ ಓಲೈಕೆ ರಾಜಕಾರಣದಲ್ಲಿ ಅವರು ನಿರತರಾಗಿರುವ ಬದಲು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ನಳಿನ್ ಕುಮಾರ್ ತಿಳಿಸಿದ್ದಾರೆ.
ಪಂಚರಾಜ್ಯ ಚುನಾವಣೆಯ ಫಲಿತಾಂಶದ ಮಾದರಿಯಲ್ಲಿ ಕರ್ನಾಟಕದಲ್ಲೂ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಏರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ಆತಂಕದಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ತುಷ್ಟೀಕರಣ, ಧಾರ್ಮಿಕ ಅಶಾಂತಿ ಮೂಡಿಸುವ ಮತ್ತು ಸಮಾಜವನ್ನು ಒಡೆಯುವ ರಾಜಕೀಯ ಮುಂದುವರೆಸಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.



















































